ದೆಹಲಿ: ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಭಾರತದ ಚಂದ್ರಯಾನ-3 ಜು. 14 ರಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆಯಾಗಿದೆ. ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಲಿದೆ ಭಾರತ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿದ್ದು, ಈ GSLV 43.5 ಮೀಟರ್ ಎತ್ತರವಿದೆ. ಈ ಪ್ರಯಾಣವು 40 ದಿನಗಳದ್ದಾಗಿದ್ದು, ಆ. 23 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಪರ್ಶಿಸುವ ನಿರೀಕ್ಷೆಯಿದೆ.
ಮೊದಲ ಬಾರಿಗೆ, ಭಾರತದ ಈ ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಅಲ್ಲಿ ನೀರಿನ ಅಣುಗಳು ಕಂಡುಬಂದಿವೆ. 2008 ರಲ್ಲಿ ಭಾರತದ ಮೊದಲ ಚಂದ್ರಯಾನದ ಸಮಯದಲ್ಲಿ ಕಂಡುಬಂದ ಈ ಸಂಶೋಧನೆಯು ಜಗತ್ತನ್ನು ಬೆಚ್ಚಿ ಬೀಳಿಸಿತ್ತು.
ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಹೊತ್ತೊಯ್ದಿದೆ. ಇದರ ಒಟ್ಟು ತೂಕ 3,926 ಕೆಜಿ. ಪ್ರೊಪಲ್ಷನ್ ಮಾಡ್ಯೂಲ್ ತೂಕವು 2,148 ಕೆಜಿ, ಲ್ಯಾಂಡರ್ (ರೋವರ್ ಸಹಿತ) 1,752 ಕೆಜಿ, ರೋವರ್ 26 ಕೆಜಿ ತೂಕವಿದೆ. ಪ್ರೊಪಲ್ಷನ್ ಮಾಡ್ಯೂಲ್ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ. ಲ್ಯಾಂಡರ್, ರೋವರ್ ಜೀವಿತಾವಧಿ 1 ಚಂದ್ರನ ದಿನ (14 ಭೂಮಿ ದಿನಗಳು) ಇರಲಿದೆ (ಚಂದ್ರನ ಹಗಲಿನಲ್ಲಿ ಚಾರ್ಜ್ ಆಗಲಿದೆ).
ವಿಕ್ರಮ್ ಸುರಕ್ಷಿತ, ಮೃದುವಾದ ಲ್ಯಾಂಡಿಂಗ್ ಮಾಡುವಂತೆ ಮಾಡಲಾಗಿದೆ. ಲ್ಯಾಂಡರ್ ನಂತರ ರೋವರ್ ಪ್ರಗ್ಯಾನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಚಂದ್ರನ ದಿನಕ್ಕೆ ಚಂದ್ರನ ಮೇಲ್ಮೈಯಲ್ಲಿ ಸಂಚರಿಸಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ. ಇದು ಚಂದ್ರನ ಮಣ್ಣನ್ನು ವಿಶ್ಲೇಷಿಸುತ್ತದೆ, ಚಂದ್ರನ ಮೇಲ್ಮೈಯ ಸುತ್ತಲೂ ತಿರುಗಿ ಚಂದ್ರನ ಕಂಪನ ದಾಖಲಿಸಲಿದೆ.






























































