ಮೈಸೂರು : ಜಿಲ್ಲೆಯ ಟಿ. ನರಸೀಪುರದಲ್ಲಿ ಕಳೆದ ಜು. 9ರಂದು ನಡೆದಿದ್ದ ಯುವ ಬ್ರಿಗೇಡ್ ಸಂಘಟನೆ ಸಂಚಾಲಕ ವೇಣುಗೋಪಾಲ ನಾಯಕ್ (31) ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಜು. 11ರಂದು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ, ಸಂದೇಶ, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್ ಬಂಧಿತ ಆರೋಪಿಗಳು. ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಮಾಹಿತಿ ನೀಡಿದ್ದು, ಉಳಿದವರ ಪತ್ತೆಗೂ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ನಡೆದ ಜಗಳ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಲ್ಲಿ ಅಂತ್ಯವಾಗಿದೆ. ಜು. 8ರಂದು ಪಟ್ಟಣದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಮೆರವಣಿಗೆ ವೇಳೆ ಸಂಧಾನ ಮಾಡಿ ಕಳುಹಿಸಲಾಗಿತ್ತು. ಆದರೆ ಭಾನುವಾರ ಮತ್ತೆ ಜಗಳ ನಡೆದಿತ್ತು, ಆ ವೇಳೆ ವೇಣುಗೋಪಾಲ್ ನಾಯಕ್ ಹತ್ಯೆ ಮಾಡಲಾಗಿತ್ತು.


































































