ಗೋವಿಂದ ಪೈ ಹೊಸತನದ ಸಾಹಿತ್ಯ ಕೃಷಿ ಮಾಡಿದ ಶ್ರೇಷ್ಠ ಕವಿ : ಡಾ. ಪಾದೇಕಲ್ಲು ವಿಷ್ಣು ಭಟ್ಟ

ಮೂಡುಬಿದಿರೆ : ಮಂಜೇಶ್ವರ ಗೋವಿಂದ ಪೈಗಳು ಅನ್ಯ ಭಾಷೆಗಳನ್ನು ಪೋಷಿಸುವುದರ ಜತೆಗೆ ಕನ್ನಡ ಭಾಷೆಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನದ ಸಾಹಿತ್ಯ ಕೃಷಿಯನ್ನು ಮಾಡಿದ ಶೇಷ್ಠ ಭಾರತೀಯ ಕವಿ ಎಂದು ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯಪಟ್ಟರು.

ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಸಾಂಸ್ಕೃತಿಕ ತಂಡದ ವತಿಯಿಂದ ಆಯೋಜಿಸಿದ್ದ ಕನ್ನಡಕ್ಕೆ ಗೋವಿಂದ ಪೈಗಳ ಕೊಡುಗೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಕವಿಗಳು ಯಾವಾಗಲೂ ಸಮಾಜವು ಸಹೃದಯ, ಸುಸಂಸ್ಕೃತವಾಗಿರಬೇಕೆಂದು ಬಯಸುತ್ತಾರೆ. ರಾಷ್ಟ್ರ ಕವಿ ಎಂ. ಗೋವಿಂದ ಪೈ ಯವರು ಕವಿತೆ, ಕಾವ್ಯ ರಚನೆ, ಭಾಷಾ ಸಂಶೋಧನೆ, ಸಾಹಿತ್ಯ ಸಂಶೋಧನಾ ವಿಷಯಗಳಲ್ಲಿ ಕೆಲಸ ಮಾಡಿದ್ದರು. ಅವರ ಮರಣದ ನಂತರವೂ ಅವರ ಹಲವು ಕವಿತೆ ಮತ್ತು ನಾಟಕಗಳು ಪ್ರಕಟಗೊಂಡಿವೆ. ಕನ್ನಡ ಏಕೀಕರಣದ ಸಮಯದಲ್ಲಿ ಮಂಜೇಶ್ವರ ಪ್ರದೇಶ ಕೇರಳಕ್ಕೆ ಸೇರ್ಪಡೆಗೊಂಡದ್ದು ಗೋವಿಂದ ಪೈ ಅವರ ಘಾಸಿಗೊಳಿಸಿತ್ತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಎ.ಐ.ಇ.ಟಿ. ಅಕಾಡೆಮಿಕ್ ಡೀನ್ ಡಾ. ದಿವಾಕರ್ ಶೆಟ್ಟಿ ಮಾತನಾಡಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಪರಿಸರದ ಕುರಿತ ಸಂವೇದನೆಯನ್ನು ನಾವು ಎಂ. ಗೋವಿಂದ ಪೈ ಅವರ ಕೃತಿಯಲ್ಲಿ ಕಾಣಬಹುದು. ಗೋವಿಂದ ಪೈ ಅವರ ಕಾವ್ಯ ರಚನೆಯಲ್ಲಿ ಇದ್ದ ಮಹತ್ತರ ವಿಷಯಗಳನ್ನು ನಾವು ಮುಂದುವರೆಸಬೇಕಾಗಿದೆ. ಅದೇ ರೀತಿ ಕನ್ನಡ ನಾಡು ನುಡಿ, ನೆಲ ಜಲ, ಭಾಷೆಯನ್ನು ರಕ್ಷಿಸಿ ಬೆಳೆಸಬೇಕು ಎಂದರು.

ಕನ್ನಡ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎ.ಐ.ಇ.ಟಿ. ಡೀನ್ ಡಾ. ದುರ್ಗಾಪ್ರಸಾದ್ ಬಾಳಿಗ, ಕನ್ನಡ ಸಂಘ ಸಂಯೋಜಕರಾದ ಗಣೇಶ್ ಎಂ. ಆರ್, ಡಾ. ಗುರುಶಾಂತ್ ಬಿ. ವಗ್ಗರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗೌರಿಕ ನಿರೂಪಿಸಿ, ಪಲ್ಲವಿ ವಂದಿಸಿದರು.













































































error: Content is protected !!
Scroll to Top