ಉತ್ತರಕ್ಕೆ ವರುಣಾಘಾತ : 15 ಸಾವು

ಕೊಚ್ಚಿ ಹೋದ ಹೆದ್ದಾರಿ, ವ್ಯಾಪಕ ಭೂಕುಸಿತ, ವಸತಿ ಪ್ರದೇಶ ಜಲಾವೃತ

ಹೊಸದಿಲ್ಲಿ : ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತ ಮತ್ತು ಮತ್ತಿತರ ಘಟನೆಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಯಮುನಾ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ನಗರ ಮತ್ತು ಪಟ್ಟಣ ಪ್ರದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಪ್ರವಾಹದ ಹೊಡೆತದಿಂದ ಗುಡ್ಡಗಾಡು ಪ್ರದೇಶಗಳಲ್ಲಿನ ರಸ್ತೆ ಕೊಚ್ಚಿ ಹೋಗಿ ಜನರು ಅತಂತ್ರರಾಗಿದ್ದಾರೆ. ರೈಲು ಸೇವೆಗೂ ಅಡ್ಡಿಯಾಗಿದ್ದು, ಸುಮಾರು 17 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.


ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ದಿಲ್ಲಿಯಲ್ಲಿ 1982ರ ನಂತರ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಅಧಿಕಾರಿಗಳು ಯಮುನಾ ನದಿಯ ನೀರಿನ ಮಟ್ಟ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೂರು ಬಾರಿ ಭೂಕುಸಿತ ಸಂಭವಿಸಿದೆ. ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ಕೋಟ್‌ಗಢ ಪ್ರದೇಶದಲ್ಲಿ ಭೂಕುಸಿತದಿಂದ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರೆ, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕಳೆದ 36 ಗಂಟೆಗಳಲ್ಲಿ ಹದಿನಾಲ್ಕು ಪ್ರಮುಖ ಭೂಕುಸಿತಗಳು ಮತ್ತು 13 ಹಠಾತ್ ಪ್ರವಾಹಗಳು ವರದಿಯಾಗಿದ್ದು, 700ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಉತ್ತರಾಖಂಡದಲ್ಲಿ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಗುಲಾರ್ ಬಳಿ ಭೂಕುಸಿತದ ನಡುವೆ ಜೀಪ್ ನದಿಗೆ ಬಿದ್ದ ನಂತರ ಮೂವರು ಯಾತ್ರಿಕರು ಗಂಗಾ ನೀರಿನಲ್ಲಿ ಮುಳುಗಿದ್ದಾರೆ. ಜೀಪಿನಲ್ಲಿ 11 ಮಂದಿ ಇದ್ದರು ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐವರನ್ನು ರಕ್ಷಿಸಲಾಗಿದೆ.
ಕಾಶಿಪುರ ಪ್ರದೇಶದಲ್ಲಿ ಎರಡು ಮನೆಗಳು ಕುಸಿದು ದಂಪತಿ ಸಾವನ್ನಪ್ಪಿದ್ದು, ಮೊಮ್ಮಗಳು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೋಡಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ಗೆ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.















































































error: Content is protected !!
Scroll to Top