ಹಾಡುಹಗಲೇ ಮನೆಗೆ ನುಗ್ಗಿ 50 ಲ.ರೂ. ದರೋಡೆ

ಸಿನಿಮೀಯ ರೀತಿಯ ದರೋಡೆ ನೋಡಿ ಬೆಚ್ಚಿಬಿದ್ದ ಜನ

ಚಿತ್ರದುರ್ಗ: ಹಾಡುಹಗಲಲ್ಲೇ ದರೋಡೆಕೋರರು ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ಇಬ್ಬರನ್ನು ಒತ್ತೆಯಾಳಾಗಿರಿಸಿಕೊಂಡು ಲಕ್ಷಾಂತರ ರೂ. ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ಸಂಭವಿಸಿದೆ. ದರೋಡೆಕೋರರು 50 ಲಕ್ಷ‌ ರೂ. ನಗದು, 12 ತೊಲೆ ಚಿನ್ನಾಭರಣ ದೋಚಿದ್ದಾರೆ.


ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಹೋಟೆಲ್‌ ಉದ್ಯಮಿ ನಜೀರ್ ಅಹ್ಮದ್ ಮನೆಗೆ ಜು. 9ರ ಬೆಳಗ್ಗೆ 9 ಗಂಟೆಗೆ ಮೂವರು ದರೋಡೆಕೋರರ ಗುಂಪು ಬಂದು ಪಿಸ್ತೂಲ್, ಲಾಂಗ್, ಚಾಕು, ಪಂಚ್ ತೋರಿಸಿ ಮನೆಯಲ್ಲಿದ್ದವರನ್ನು ಬೆದರಿಸಿದ್ದಾರೆ. ನಜೀರ್ ಅಹ್ಮದ್‌ಗೆ ಪಿಸ್ತೂಲ್‌ನಿಂದ ತಿವಿದು ಕಣ್ಣಿನ ಬಳಿ ಗಾಯಗೊಳಿಸಿ, ಜೀವ ಬೆದರಿಕೆಯೊಡ್ಡಿ ಮನೆಯಲ್ಲಿದ್ದವರ ಮೊಬೈಲ್ ಕಸಿದುಕೊಂಡು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಲ್ಲದೆ, ಕೈಗಳನ್ನು ಕಟ್ಟಿ ಹಾಕಿ ಹಣ ನೀಡುವಂತೆ ಬೆದರಿಸಿದ್ದಾರೆ. 50 ಲಕ್ಷ ರೂ. ಕೊಡಲು ಒಪ್ಪಿದಾಗ ನಜೀರ್ ಅಹ್ಮದ್ ಪುತ್ರ ಸಮೀರ್ ಮತ್ತು ಅಳಿಯ ಶಹನಾಜ್‌ರನ್ನು ಒತ್ತೆಯಾಳಾಗಿರಿಸಿಕೊಂಡು ಕಾರಲ್ಲಿ ಕರೆದೊಯ್ದಿದ್ದಾರೆ.


ಚಿತ್ರದುರ್ಗದ ಕ್ಯಾದಿಗೆರೆ ಬಳಿ ಓರ್ವ ವ್ಯಕ್ತಿ ಬಳಿ ತುರ್ತಾಗಿ ಹಣ ಬೇಕೆಂದು ಕೇಳಿಕೊಂಡು 25 ಲಕ್ಷ ರೂ. ತೆಗೆದುಕೊಂಡು ಕೊಟ್ಟಿದ್ದಾರೆ. ಬಳಿಕ ದಾವಣಗೆರೆಗೆ ಕರೆದೊಯ್ದು ಅಲ್ಲೊಬ್ಬರ ಬಳಿ 25 ಲಕ್ಷ ರೂ. ಪಡೆದು ಕೊಟ್ಟಿದ್ದಾರೆ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ವಾಪಸ್ ಬರುವ ವೇಳೆ ಚನ್ನಗಿರಿ ತಾಲೂಕಿನ ಗ್ರಾಮವೊಂದರ ಬಳಿ ಪೊಲೀಸ್ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅನುಮಾನಗೊಂಡ ದಾವಣಗೆರೆ ಪೊಲೀಸರು ಕಾರನ್ನು ಬೆನ್ನತ್ತಿದ್ದಾರೆ. ಕೊನೆಗೂ ಪೊಲೀಸರು ಕಾರ್ ಹಿಡಿದಾಗ ಸಮೀರ್ ಮತ್ತು ಶಹನಾಜ್‌ರನ್ನು ಬಿಟ್ಟು ದರೋಡೆಕೋರರು ಜಮೀನುಗಳಲ್ಲಿ ಓಡಿ ಹೋಗಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದು ಓರ್ವ ಸಿಕ್ಕಿ ಬಿದ್ದಿದ್ದಾನೆ.















































































error: Content is protected !!
Scroll to Top