ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

4 ವರ್ಷದ ಹಿಂದೆ ಯುವಕನನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ ಪ್ರಕರಣ

ಮಂಗಳೂರು: ಇಬ್ಬರು ಕೊಲೆ ಅಪರಾಧಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಂಗಳೂರಿನ ಬಡಗ ಎಡಪದವು ನಿವಾಸಿಗಳಾದ ರಮೇಶ್ ಶೆಟ್ಟಿಗಾರ್(41) ಹಾಗೂ ನಿತ್ಯಾನಂದ (41) ಶಿಕ್ಷೆಗೊಳಗಾದ ಅಪರಾಧಿಗಳು. ನ್ಯಾಯಾಧೀಶ ಕಾಂತರಾಜು ಎಸ್.ವಿ.ಯವರು ಜೀವಾವಧಿ ಶಿಕ್ಷೆ ವಿಧಿಸಿದ ತೀರ್ಪು ನೀಡಿದ್ದಾರೆ.
ಹಣದ ವ್ಯವಹಾರ ಮತ್ತು ರಮೇಶ ಶೆಟ್ಟಿಗಾರ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾನೆಂಬ ದ್ವೇಷದಿಂದ ಆರೋಪಿಗಳು 2019ರ ಮೇ 17ರ ರಾತ್ರಿ 11.50ಕ್ಕೆ ಬಡಗ ಎಡಪದವು ಗ್ರಾಮದ ದೂಮಚಡವು ದಡ್ಡಿ ಕ್ರಾಸ್ ಎಂಬಲ್ಲಿ ಬಡಗ ಎಡಪದವು ನಿವಾಸಿ ನವೀನ (28)‌ ಎಂಬವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ತಮ್ಮ ಬಟ್ಟೆ ಬರೆಗಳನ್ನು ಕಾಡಿನಲ್ಲಿ ಸುಟ್ಟು ಸಾಕ್ಷ್ಯ ನಾಶ ಮಾಡಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಐಪಿಸಿ ಕಲಂ 302ರಡಿ ಕಠಿಣ ಜೀವಾವಧಿ ಶಿಕ್ಷೆ, 2 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಕಠಿಣ ಜೀವಾವಧಿ ಶಿಕ್ಷೆ, ಕಲಂ 201ರಡಿ 7 ವರ್ಷಗಳ ಕಠಿಣ ಸಜೆ, 1 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಕೊಲೆಯಾದ ನವೀನ್ ತಾಯಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.







































































































































error: Content is protected !!
Scroll to Top