65 ವರ್ಷ ಮೇಲ್ಪಟ್ಟವರು ಸರತಿ ಸಾಲಿನಲ್ಲಿ ನಿಂತು ಕಾಯುವುದು ಬೇಡ ಎಂದ ಸರಕಾರ
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿಂದೂ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇನ್ನು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನೇರವಾಗಿ ದೇವರ ದರ್ಶನಕ್ಕೆ ತೆರಳಬಹುದು. ಈ ಕುರಿತು ಸರಕಾರ ಆದೇಶ ಹೊರಡಿಸಿದೆ.
ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ದಾಖಲೆ ಅಥವಾ ಆಧಾರ್ ತೋರಿಸಿದರೆ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಸವ ರಾಜೇಂದ್ರ ಸುತ್ತೋಲೆ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಿಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಕೆಲವೆಡೆ ಕಿಲೋಮೀಟರ್ಗಟ್ಟಲೆ ಕ್ಯೂ ಇರುತ್ತದೆ. ವಯಸ್ಸಾದವರಿಗೆ ಹೀಗೆ ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ದೇಗುಲಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಸೂಚಿಸಲಾಗಿದೆ. ಇಲ್ಲವಾದರೆ ಅವರಿಗೆ ನೇರ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಧಾರ್ಮಿಕ ದತ್ತಿ ಖಾತೆ ಸಚಿವ ರಾಮಲಿಂಗ ರೆಡ್ಡಿ ಸೂಚಿಸಿದ್ದಾರೆ.
ತಿರುಪತಿ ದೇವಾಲಯದ ಮಾದರಿಯಂತೆ ಹಿರಿಯ ನಾಗರಿಕರು ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ನೇರವಾಗಿ ದೇವರ ದರ್ಶನ ಪಡೆಯಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನೇರ ಪ್ರವೇಶದ ಜತೆ ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು ಸ್ಥಾಪಿಸುವುದು, ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಆನ್ಲೈನ್ ಬುಕ್ಕಿಂಗ್‌ನಲ್ಲೂ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕೊಡಲು ಸೂಚಿಸಿರುವ ಸಚಿವ ರೆಡ್ಡಿ ಅವರು, ಎಲ್ಲ ದೇವಸ್ಥಾನಗಳು ಸ್ವಚ್ಚವಾಗಿರಬೇಕು. ದೇವಸ್ಥಾನಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದಾರೆ.






























































