ಆತ್ಮವಿಶ್ವಾಸ ಯಶಸ್ಸಿನ ಮೂಲಮಂತ್ರ – ಮಿತ್ರಪ್ರಭಾ ಹೆಗ್ಡೆ
ಕಾರ್ಕಳ : ಸಾಧನೆಯ ಶಿಖರವನ್ನು ಏರುವಾಗ ಏಳು ಬೀಳುಗಳು ಸಾಮಾನ್ಯ, ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂದುವರೆಯಬೇಕು. ಜೀವನದಲ್ಲಿ ಸದಾ ಕ್ರೀಯಾಶೀಲರಾದರೆ ಯಾವ ಕೆಲಸವು ಅಸಾಧ್ಯವಲ್ಲ. ತಂದೆ – ತಾಯಿ ಮತ್ತು ಗುರುಗಳ ಪ್ರೋತ್ಸಾಹ ಸಾಧನೆಗೆ ಸ್ಪೂರ್ತಿ ತುಂಬಿದರೆ, ಆತ್ಮವಿಶ್ವಾಸ ಯಶಸ್ಸಿನ ಮೂಲಮಂತ್ರ ಎಂದು ಎಸ್ವಿಟಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಜೂ. 17 ರಂದು ಕೆಎಂಇಎಸ್ ಆಂಗ್ಲ ಮಾಧ್ಯಮ ಶಾಲೆಯ 40ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಹಳೆವಿದ್ಯಾರ್ಥಿ ವಕೀಲ ವಿಖ್ಯಾತ್ ಜೈನ್ ಮಾತನಾಡಿ, ಕೆಎಂಇಎಸ್ ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕ್ರತಿಕ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಡುತ್ತಿದೆ. ಸಂಸ್ಥೆ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆ ಯಶಸ್ವಿಯಾಗಿ 40 ವರ್ಷ ಪೂರೈಸಿದ್ದು, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ನಿರಂತರವಾಗಿ ಸಂಸ್ಥೆಯಿಂದಾಗಬೇಕು ಎಂದು ಶಾಲಾ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ಹೇಳಿದರು.
ಇದೇ ಸಂದರ್ಭ ಟೇಬಲ್ ಟೆನಿಸ್ ಕೊಠಡಿ ಮತ್ತು ಇಕೋ ಕ್ಲಬ್ಗೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕಿ ಲೊಲಿಟಾ ಡಿಸಿಲ್ವ ಸ್ವಾಗತಿಸಿ, ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿಯರಾದ ಶ್ರೀಮತಿ ಪಾಟ್ಕರ್ ನಿರೂಪಿಸಿ, ಪೂಜಾ ವಂದಿಸಿದರು.






































