ಗಾಂಜಾ ವ್ಯವಹಾರದ ಜಗಳ ಕಾರಣ ಎಂಬ ಶಂಕೆ
ಮಂಗಳೂರು : ಮೂಡಿಗೆರೆಯಲ್ಲಿ ಬಂಟ್ವಾಳದ ವ್ಯಕ್ತಿಯೋರ್ವರನ್ನು ಪೆಟ್ರೋಲ್ ಸುರಿದು ಸುಟ್ಟು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಇರಾ ಗ್ರಾಮದ ನಿವಾಸಿ ಅಬ್ಬಾಸ್ ಅವರ ಪುತ್ರ ಫವಾಜ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆಯ ಹಿಂದೆ ಗಾಂಜಾ ವಹಿವಾಟು ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಫವಾಜ್‌ನನ್ನು ಆರೋಪಿಗಳು ಪೆಟ್ರೋಲ್ ಸುರಿದು ಕೊಲೆ ಮಾಡಿದ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿ ಹೋಗಿದ್ದಾರೆ. ಫಯಾಜ್‌ಗೆ ಮದುವೆಯಾಗಿದ್ದು ಈಗ ಹೆಂಡತಿಯನ್ನು ಬಿಟ್ಟಿದ್ದಾನೆ. ಈತ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದಲ್ಲದೆ, ಗಾಂಜಾ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ.
ಒಳ್ಳೆಯ ಕುಟುಂಬದ ಯುವಕನಾಗಿದ್ದ ಈತನ ಕೆಟ್ಟಬುದ್ಧಿಯಿಂದ ಬೇಸತ್ತು ಮನೆಯವರು ಮನೆಯಿಂದ ಹೊರಹಾಕಿದ್ದರು. ಗಾಂಜಾ ವಹಿವಾಟು ಜೋರಾಗಿ ನಡೆಸುತ್ತಿದ್ದ ಈತನಿಗೆ ಗಾಂಜಾ ಪೆಡ್ಲರ್‌ಗಳ ಜತೆ ನಿಕಟ ಸಂಪರ್ಕವಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರೊಳಗೆ ಹಣಕಾಸಿನ ಅಥವಾ ಗಾಂಜಾ ವಿಚಾರದಲ್ಲಿ ವೈಮಸ್ಸು ಉಂಟಾಗಿ ಈತನನ್ನು ಸುಮಾರು ಹತ್ತು ದಿನಗಳ ಹಿಂದೆ ಇರಾದಿಂದ ಕಿಡ್ನಾಪ್ ಮಾಡಿದ್ದರು. ಬಳಿಕ ಯಾವುದೋ ಅಜ್ಞಾತ ಸ್ಥಳದಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಕೊಲೆ ಮಾಡಿ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿದ್ದಾರೆ. ವಗ್ಗ ಅಥವಾ ಕಾವಳಕಟ್ಟೆ ಮೂಲದ ಯುವಕರು ಈತನ ಕೊಲೆಯ ಹಿಂದೆ ಇರುವ ಆರೋಪಿಗಳು ಎಂಬ ಮಾಹಿತಿ ಪೋಲೀಸ್ ಇಲಾಖೆ ಲಭ್ಯವಾಗಿದೆ. ಸ್ನೇಹಿತ ಗಾಂಜಾ ವ್ಯಸನಿಗಳಿಗೆ ಈತನ ಕಿಡ್ನಾಪ್ ಬಗ್ಗೆ ಮಾಹಿತಿ ಇತ್ತು ಎನ್ನಲಾಗಿದ್ದು, ಸ್ನೇಹಿತರೇ ಈತನ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.















































































