ಇದು 30 ಸಾವಿರ ಸಂಬಳ ಪಡೆಯುವ ಮಹಿಳಾ ಇಂಜಿನಿಯರ್ ಬಂಗಲೆಯಲ್ಲಿ ಸಿಕ್ಕಿದ ಸಂಪತ್ತು
ಭೋಪಾಲ : 30 ಲ. ರೂ. ಬೆಲೆಬಾಳುವ ಟಿವಿ, 50ಕ್ಕೂ ಅಧಿಕ ವಿದೇಶಿ ತಳಿಯ ನಾಯಿಗಳು, 10 ಐಷರಾಮಿ ಕಾರುಗಳು, ಕೆಜೆಗಟ್ಟಲೆ ಚಿನ್ನ, ಬೆಳ್ಳಿ ಒಡವೆಗಳು. ಈ ಆಸ್ತಿಗಳನ್ನು ನೋಡಿ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳೇ ದಂಗುಬಡಿದು ನಿಂತುಬಿಟ್ಟರು. ಇದು ಯಾರೋ ರಾಜಕಾರಣಿ ಅಥವಾ ಉದ್ಯಮಿಗೆ ಸೇರಿದ ಆಸ್ತಿ ಎಂದು ಭಾವಿಸಿದ್ದರೆ ನಿಮ್ಮ ಎಣಿಕೆ ತಪ್ಪು. ಯಕಶ್ಚಿತ್ ಸಹಾಯಕ ಮಹಿಳಾ ಇಂಜಿನಿಯರ್ ಒಬ್ಬರ ಮನೆಯಲ್ಲಿ ಸಿಕ್ಕಿದ ಸಂಪತ್ತು ಇದು. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಅನುಮಾನದಲ್ಲಿ ಭೋಪಾಲದಲ್ಲಿರುವ ಇಂಜಿನಿಯರ್ ಮನಗೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಬರೀ 30 ಸಾವಿರ ಸಂಬಳ ಇರುವ ಸಹಾಯಕ ಇಂಜಿನಿಯರ್ ಗುಡ್ಡೆ ಹಾಕಿದ್ದ ಸಂಪತ್ತು ನೋಡಿ ಬೆಕ್ಕಸ ಬೆರಗಾಗಿದ್ದಾರೆ.
ಮಧ್ಯ ಪ್ರದೇಶ ಪೊಲೀಸ್ ಹೌಸಿಂಗ್ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಅದೂ ಗುತ್ತಿಗೆ ಮೇಲೆ ನೇಮಕಾತಿ ಹೊಂದಿರುವ ಹೇಮಾ ಮೀನಾ ಬರೀ 10 ವರ್ಷದಲ್ಲಿ ಮಾಡಿಟ್ಟ ಆಸ್ತಿ ಇದು. ಅವರಿಗೆ ತಿಂಗಳ ಸಂಬಳ ಇರುವುದು ಬರೀ 30 ಸಾವಿರ ರೂ. ಇದು ಅವರ ಬಳಿಯಿರುವ ವಿದೇಶಿ ನಾಯಿಗಳ ಪೈಕಿ ಒಂದನ್ನು ಸಾಕಲು ಕೂಡ ಸಾಲದು.
2020ರಿಂದಲೇ ಹೇಮಾ ಮೀನಾ ವಿರುದ್ಧ ಭಾರಿ ಸಂಪತ್ತು ಸಂಗ್ರಹಿಸಿರುವ ದೂರು ಇತ್ತು. ತನಿಖೆಯ ನಂತರ ಇಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಡಿದರು.
ಹೇಮಾ ಮೀನಾ ವಾಸವಾಗಿರುವುದು 40 ಕೋಣೆಗಳುಳ್ಳ ಬೃಹತ್ ಬಂಗಲೆಯಲ್ಲಿ. 20 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಬಂಗಲೆ ಆಕೆಯ ತಂದೆ ಹೆಸರಿನಲ್ಲಿದೆ.ಈ ಬಂಗಲೆ ಮೌಲ್ಯ ಸುಮಾರು 1 ಕೋ. ರೂ. 50ಕ್ಕೂ ಹೆಚ್ಚು ವಿದೇಶಿ ತಳಿಯ ನಾಯಿಗಳಿದ್ದು, ಇವುಗಳನ್ನು ನೋಡಿಕೊಳ್ಳಲು ಆಳುಕಾಲುಗಳು ಇದ್ದಾರೆ. ಈ ನಾಯಿಗಳೇ ಒಂದೊಂದು ಸುಮಾರು ಒಂದು ಲಕ್ಷದಷ್ಟು ಬೆಲೆಬಾಳುತ್ತವೆ. ಜತೆಗೆ ವಿವಿಧ ತಳಿಯ ಸುಮಾರು 70 ದನಗಳನ್ನೂ ಸಾಕಿದ್ದಾರೆ. ಬಂಗಲೆಯೊಳಗೆ ಕೆಲಸಗಾರರು, ಮ್ಯಾನೇಜರ್‌ಗಳು ಹಾಗೂ ಇನ್ನಿತರ ನೌಕರರ ಜತೆ ಈ ಮಹಿಳೆ ವಾಕಿಟಾಕಿಯಲ್ಲಿ ಮಾತನಾಡುತ್ತಿದ್ದರಂತೆ. ಬಂಗಲೆಯಲ್ಲಿ ಕಾರುಗಳಲ್ಲದೆ ಟ್ರಕ್, ಜೀಪಿನಂಥ ಇನ್ನಿತರ ವಾಹನಗಳೂ ಇವೆ. ವಿಚ್ಚೇದಿತಯಾಗಿರುವ ಹೇಮಾ ಮೀನಾ ತಂದೆ ಜತೆ ಬಂಗಲೆಯಲ್ಲಿ ವಾಸವಾಗಿದ್ದಾರೆ. 2011ರಲ್ಲಿ ನೌಕರಿಗೆ ಸೇರಿದ ಬಳಿಕ ಆಕೆ ಇಷ್ಟು ಸಂಪತ್ತು ಸಂಗ್ರಹಿಸಿರುವುದು ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
























