ಕಾರ್ಕಳ : ಮಿಯ್ಯಾರು ಸಮಾಜ ಮಂದಿರ ಮತಗಟ್ಟೆಯಲ್ಲಿ ಅಕ್ರಮ ಮತದಾನವಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ದುಬೈಯಲ್ಲಿರುವ ವ್ಯಕ್ತಿಯ ಮತವನ್ನು ಅಪ್ರಾಪ್ತನೋರ್ವ ಚಲಾಯಿಸಿರುವ ಸಂಗತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಿಯ್ಯಾರಿನ ಸುಹಾಸ್ ಶೆಟ್ಟಿ ಎಂಬವರು ವಿದೇಶದಲ್ಲಿದ್ದು ಅವರ ಮತವನ್ನು ಧೀರಜ್ ಎಂಬಾತ ಚಲಾಯಿಸಿದ್ದಾನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಆರೋಪಿಸಿದ್ದಾರೆ. ಮತದಾನ ಸಮಯ ಮುಗಿದ ಬಳಿಕ ಕಾಂಗ್ರೆಸ್ ಏಜೆಂಟ್ ಅವರು ಅಕ್ರಮ ಮತದಾನವಾಗಿರುವ ವಿಚಾರ ಮತಗಟ್ಟೆ ಅಧಿಕಾರಿ ಗಮನಕ್ಕೆ ತಂದಿರುತ್ತಾರೆ. ಮತಗಟ್ಟೆ ಅಧಿಕಾರಿಯವರು ಕಾಂಗ್ರೆಸ್ ನವರು ನೀಡಿದ ದೂರನ್ನು ಸ್ವೀಕರಿಸದೇ ತೆರಳಿದ ಪರಿಣಾಮ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ.
ಆಧಾರ್ ಕೇಳಿದರು
ಅಕ್ರಮ ಮತದಾನವೆಸಗಿ ಮತಕೇಂದ್ರದಿಂದ ಹೊರಬಂದ ಯುವಕ ಬಗ್ಗೆ ಅನುಮಾನಗೊಂಡು ಕಾಂಗ್ರೆಸ್ ಕಾರ್ಯಕರ್ತರು ಆತನಲ್ಲಿ ವಿಚಾರಿಸಿದರೆನ್ನಲಾಗಿದೆ. ಈ ವೇಳೆ ಮತದಾರರ ಗುರುಚಿ ಚೀಟಿ ಇರಲಿಲ್ಲ. ಆಧಾರ್ ಕಾರ್ಡ್ ತೋರಿಸಿ ಮತ ಚಲಾಯಿಸಿದ್ದು ಎಂದು ಆತ ಒಪ್ಪಿಕೊಂಡಿರುತ್ತಾನೆ. ಬಳಿಕ ಆತನನ್ನು ಪೊಲೀಸರು ವಿಚಾರಿಸಿದ್ದಾರೆ.
ಬಸ್ ತಡೆದ ಕಾರ್ಯಕರ್ತರು
ಮತಯಂತ್ರ ತುಂಬಿಸಿ ಡಿ ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಸಿದ್ಧವಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆಯೂ ನಡೆಯಿತು. ಈ ವೇಳೆ ಬಿಗುವಿನ ವಾತಾವರಣವೂ ನಿರ್ಮಾಣವಾಯಿತು.

























