ಕಾರ್ಕಳದಲ್ಲಿ ಶೇ. 81.30 ಮತದಾನ

9 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ 209 ಬೂತ್‌ಗಳಲ್ಲೂ ಬುಧವಾರ ಅತ್ಯಂತ ಶಾಂತಿಯುತವಾಗಿ ಮತದಾನ ನೆರವೇರಿತು. ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಸಂಭ್ರಮ, ಉತ್ಸಾಹದೊಂದಿಗೆ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ದಾಖಲೆ ಪ್ರಮಾಣ ಎಂಬಂತೆ ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದರು. ಕಾರ್ಕಳ ವಿಧಾನಸಭಾ ಕ್ಷೇತ್ರದ 9 ಅಭ್ಯರ್ಥಿಗಳ ಭವಿಷ್ಯ ಮತಯತ್ರದಲ್ಲಿ ಭದ್ರವಾಗಿದ್ದು, ಯಾರು ತಮ್ಮ ನಾಯಕ ಆಗಬೇಕು ಎಂದು ಮತದಾರರು ಈಗಾಗಲೇ ನಿರ್ಧರಿಸಿ ಆಯಿತು.

ದಾಖಲೆ ಪ್ರಮಾಣದಲ್ಲಿ ಮತದಾನ
ಕಾರ್ಕಳದಲ್ಲಿ ಈ ಬಾರಿ ಮತದಾರ ಪ್ರಭುಗಳು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ 81.30 ಶೇ. ಮತದಾನವಾಗಿದೆ. 99142 ಮಹಿಳಾ, 91435 ಪುರುಷ ಮತದಾರರು ಸೇರಿದಂತೆ ಒಟ್ಟು 1,90,577 ಮತದಾರರಿದ್ದರು. ಅವರಲ್ಲಿ 81.30 ಶೇ. ಮಂದಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಶೇ. 80.19 ಮತದಾನವಾಗಿತ್ತು. ಈ ಸಂದರ್ಭ ಕಾರ್ಕಳದಲ್ಲಿ 85,676 ಪುರುಷರು ಹಾಗೂ 93,331 ಮಹಿಳಾ ಮತದಾರರಿದ್ದರು.

ಮನೆಗೆ ಮರಳಿದ ಮತದಾರರು
ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಕ್ಯೂ ನಿಂತಿದ್ದ ಮತದಾರರು ನಿಧಾನಗತಿಯ ಮತದಾನ ಪ್ರಕ್ರಿಯೆಯಿಂದ ಬೇಸತ್ತು ವಾಪಸ್‌ ಮನೆಗೆ ಮರಳಿದ ಘಟನೆಯೂ ನಡೆದಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸಾಲು ನಿಂತಿದ್ದ ಮತದಾರರು ಸಮಯ 12:30 ಆಗುತ್ತಿದ್ದಂತೆ ವಾಪಸಾದರು. 1250 ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಹೆಬ್ರಿ ಸರಕಾರಿ ಶಾಲಾ ಸಖಿ ಮತಗಟ್ಟೆಯಲ್ಲಿ ಒಂದೇ ಇವಿಎಂ ಮೆಷಿನ್‌ ಇತ್ತು. ಹಾಗಾಗಿ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಸಂಜೆ ವೇಳೆ ಗುಡುಗಿನ ಆರ್ಭಟ, ಮಳೆ ಮತದಾನಕ್ಕೆ ಕೊಂಚ ಅಡಚಣೆಯಾಗಿ ಪರಿಣಮಿಸಿತ್ತು.

11 ಗಂಟೆಗೆ ಶೇ. 33 ಮತದಾನ
ಕಾರ್ಕಳ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ. 33 ಮತದಾನವಾಗಿದೆ. 32, 200 ಪುರುಷರು ಹಾಗೂ 30,679 ಮಹಿಳೆಯರು ಸೇರಿದಂತೆ 62,888 ಮತದಾರರು 11 ಗಂಟೆ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದರು.

1 ಗಂಟೆಗೆ 49.13 ಮತದಾನ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 49.13 ಮತದಾನವಾಗಿದೆ. 45, 005 ಮಹಿಳೆಯರು, 48, 633 ಪುರುಷರು ಸೇರಿದಂತೆ 93, 638 ಮತದಾರರು ಮತ ಚಲಾಯಿಸಿದರು.

3 ಗಂಟೆಗೆ ಶೇ. 62.20 ಮತದಾನ
ಮಧ್ಯಾಹ್ನ ಬಳಿಕ ತುಸು ನಿಧಾನಗತಿಯಲ್ಲಿ ಮತದಾನವಾಗಿದೆ. 3 ಗಂಟೆಗೆ ಶೇ. 62.20 ಮತದಾನವಾಗಿದ್ದು, 61,660 ಮಹಿಳೆಯರು, 56,882 ಪುರುಷರು ಸೇರಿದಂತೆ ಒಟ್ಟು 1,18,542 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಬಿಸಿಲಿನ ಬೇಗೆಗೆ ಮತಗಟ್ಟೆಗಳಲ್ಲಿ ಮಧ್ಯಾಹ್ನ ವೇಳೆ ಜನವಿರಳವಾಗಿತ್ತು.

5 ಗಂಟೆಗೆ ಶೆ. 75.54 ಮತದಾನ
ಸಂಜೆ 5 ಗಂಟೆಯ ವೇಳೆಗೆ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಶೇ. 75. 54 ಮತದಾನವಾಗಿದೆ. 75796 ಮಹಿಳೆಯರು, 68174 ಪುರುಷರು ಸೇರಿದಂತೆ ಒಟ್ಟು 143970 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

















































error: Content is protected !!
Scroll to Top