ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ರಂಗಕ್ಕೆ; ಅಮಿತ್ ಶಾ ನಿಗಾ
ಗುವಾಹಟಿ: ಮಣಿಪುರ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂಫಾಲ್‌ನಲ್ಲಿ ನಿಯೋಜನೆಗೊಂಡ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹತ್ಯೆಯಾಗಿದ್ದಾರೆ. ಇಂಫಾಲದಲ್ಲಿ ತೆರಿಗೆ ಸಹಾಯಕರಾದ ಲೆಟ್ಮಿಂಥಾಂಗ್ ಹಾಕಿಪ್ ಎಂಬವರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಮಣಿಪುರ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 355ನೇ ವಿಧಿ ಜಾರಿಗೊಳಿಸಿ ಭದ್ರತೆಯ ಸಂಪೂರ್ಣ ಹೊಣೆ ವಹಿಸಿಕೊಂಡಿದೆ. 355ನೇ ವಿಧಿ ಆಂತರಿಕ ಅಡಚಣೆಗಳು ಮತ್ತು ಬಾಹ್ಯ ಆಕ್ರಮಣಗಳ ವಿರುದ್ಧ ರಾಜ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಕರ್ನಾಟಕ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಮಣಿಪುರ ಸರ್ಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಗುಪ್ತಚರ) ಅಶುತೋಷ್ ಸಿನ್ಹಾ ಅವರನ್ನು ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ಮತ್ತು ಸಹಜ ಸ್ಥಿತಿಗೆ ತರಲು ಒಟ್ಟಾರೆ ಕಾರ್ಯಾಚರಣೆಯ ಕಮಾಂಡರ್ ಆಗಿ ನೇಮಿಸಿದೆ.
ರಾಜ್ಯ ರಾಜಧಾನಿ ಇಂಫಾಲದಲ್ಲಿ ಗುರುವಾರ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ಅವರನ್ನು ಚಿಕಿತ್ಸೆಗಾಗಿ ಶುಕ್ರವಾರ ದೆಹಲಿಗೆ ಕರೆದೊಯ್ಯಲಾಗಿದೆ.
ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಣಿಪುರಕ್ಕೆ ಪ್ರಯಾಣಿಸುವ ಎರಡು ರೈಲುಗಳನ್ನು ಅಸ್ಸಾಂನಲ್ಲಿ ರೈಲ್ವೆ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ.
























