ಹೆಂಡತಿ, ಮಗಳ ಹತ್ಯೆಗೆ ಯತ್ನ : ಬೋಳದ ವೈದ್ಯ ಬಂಧನ

ನಿಶ್ಚಿತಾರ್ಥವಾಗಿದ್ದ ಮಗಳನ್ನು ಕೊಲೆ ಮಾಡಲು ಮುಂದಾದ ತಂದೆ

ಮುಂಬಯಿ : ಕಾರ್ಕಳ ಮೂಲದ ವೈದ್ಯರೊಬ್ಬರು ಹೆಂಡತಿ ಮತ್ತು ಮಗಳನ್ನು ಚಾಕುವಿನಿಂದ ಇರಿದು, ಸುತ್ತಿಗೆಯಿಂದ ಹೊಡೆದು ಸಾಯಿಸಲು ಯತ್ನಿಸಿದ ಘಟನೆ ಮುಂಬಯಿಯ ವರ್ಸೋವಾದಲ್ಲಿ ಏ.27ರಂದು ಸಂಭವಿಸಿದೆ. ಕಾರ್ಕಳ ತಾಲೂಕಿನ ಮಂಜರಪಲ್ಕೆ ಸಮೀಪದ ಬೋಳದ ಡಾ| ಪ್ರಭಾಕರ ಶೆಟ್ಟಿ ಬೋಳ ಎಂಬವರು ಈ ಕೃತ್ಯ ಎಸಗಿದ್ದಾರೆ. ಮಗಳು ಅಂತರ್‌ಜಾತಿ ಮದುವೆಯಾಗಲು ಮುಂದಾದ ಸಿಟ್ಟಿನಲ್ಲಿ ಡಾ| ಪ್ರಭಾಕರ ಶೆಟ್ಟಿಯವರು ಈ ಕೃತ್ಯ ಎಸಗಿದ್ದಾರೆ.
ಬಿಫಾರ್ಮಾ ಮತ್ತು ಅಮೆರಿಕದಲ್ಲಿ ಎಂಎಸ್‌ಸಿ ಮಾಡಿ ಉನ್ನತ ಉದ್ಯೋಗದಲ್ಲಿದ್ದ ಮಗಳು ಪ್ರಣೀತಾಗೆ 38 ವರ್ಷವಾಗಿದ್ದರೂ ತಂದೆ ಪ್ರಭಾಕರ ಶೆಟ್ಟಿಯವರು ಮದುವೆ ಮಾಡಿರಲಿಲ್ಲ. ಪ್ರಭಾಕರ ಶೆಟ್ಟಿಯವರು ವೈದ್ಯರಾಗಿದ್ದರೂ ವೈದ್ಯಕೀಯ ವೃತ್ತಿ ಬಿಟ್ಟು ಬಹಳ ವರ್ಷವಾಗಿತ್ತು. ವರ್ಸೋವಾದ ಪ್ರತಿಷ್ಠಿತ ಬಡಾವಣೆ ಸೆವೆನ್‌ ಬಂಗ್ಲೊ ಏರಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಅವರು ವಾಸವಾಗಿದ್ದರು. ಹೆಂಡತಿ ಮಗಳೇ ಅವರ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದರು. ಪ್ರಣೀತಾ ಮಾರ್ವಾಡಿ ಸಮುದಾಯದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ವಯಸ್ಸು ಮೀರಿದ ಮಗಳಿಗೆ ಮದುವೆಯಾಗಿಲ್ಲ ಎಂಬ ಚಿಂತೆಯಲ್ಲಿದ್ದ ತಾಯಿ ಈ ಮದುವೆಗೆ ಒಪ್ಪಿದ್ದರೂ ಪ್ರಭಾಕರ ಶೆಟ್ಟಿಯವರು ಸಮ್ಮತಿಸಿರಲಿಲ್ಲ. ತಂದೆಯ ವಿರೋಧದ ನಡುವೆಯೇ ಏ.26ರಂದು ರಾತ್ರಿ ಮಗಳ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಏ.30ಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆ ಆಮಂತ್ರಣ ಪತ್ರದಲ್ಲಿ ಪ್ರಭಾಕರ ಶೆಟ್ಟಿಯವರ ಹೆಸರು ಹಾಕಿರಲಿಲ್ಲ.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಪ್ರಭಾಕರ ಶೆಟ್ಟಿಯವರು ಹೋಗಿರಲಿಲ್ಲ. ನಿಶ್ಚಿತಾರ್ಥ ಮುಗಿಸಿ ತಾಯಿ ಮಗಳು ಮನೆಗೆ ಬಂದಾಗ ಮನೆಯಲ್ಲಿದ್ದ ಪ್ರಭಾಕರ ಶೆಟ್ಟಿಯವರ ವರ್ತನೆ ಬದಲಾಗಿತ್ತು. ಅವರು ಅಸಹನೆಯಿಂದ ಕುದಿಯುತ್ತಿದ್ದರು. ಏ.27ರ ನಸುಕಿನ ಹೊತ್ತು ಪ್ರಭಾಕರ ಶೆಟ್ಟಿಯವರು ಬೆಡ್‌ರೂಮ್‌ನಲ್ಲಿ ಮಲಗಿದ್ದ ಹೆಂಡತಿ ಗೀತಾ (68) ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಕುತ್ತಿಗೆಗೆ ಹಗ್ಗ ಬಿಗಿದು ಸಾಯಿಸಲು ಮುಂದಾಗಿದ್ದರು. ಬೆಡ್‌ರೂಮ್‌ನಿಂದ ಬೊಬ್ಬೆ ಕೇಳಿ ಬಂದಾಗ ಹಾಲ್‌ನಲ್ಲಿ ಮಲಗಿದ್ದ ಮಗಳು ಓಡಿ ಬಂದಿದ್ದಾರೆ. ಆಗ ಪ್ರಭಾಕರ ಶೆಟ್ಟಿಯವರು ಇಬ್ಬರ ಮೇಲೂ ಚಾಕುವಿನಿಂದ ಹಲ್ಲೆ ಮಾಡಿ ಸಾಯಿಸಲು ಯತ್ನಿಸಿದ್ದಾರೆ.
ಅವರಿಂದ ತಪ್ಪಿಸಿಕೊಂಡ ತಾಯಿ-ಮಗಳು ಬೊಬ್ಬೆ ಹಾಕಿ ನೆರೆಹೊರೆಯವರನ್ನು ಎಬ್ಬಿಸಿದ್ದು, ಅಕ್ಕಪಕ್ಕದವರು ಓಡಿ ಬಂದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಅಂಬಾನಿ ಆಸ್ಪತ್ರೆಗೆ ದಾಖಲಿಸಿದರು. ವರ್ಸೋವಾ ಪೊಲೀಸರು ಡಾ| ಪ್ರಭಾಕರ ಶೆಟ್ಟಿಯವರನ್ನು ಬಂಧಿಸಿ ಕೊಲೆ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯ ಅವರನ್ನು ಮೇ 2ರ ತನಕ ಪೊಲೀಸರ ಕಸ್ಟಡಿಗೊಪ್ಪಿಸಿದೆ.
ಹೆಂಡತಿ ಮತ್ತು ಮಗಳನ್ನು ಸಾಯಿಸಲು ಡಾ| ಪ್ರಭಾಕರ ಶೆಟ್ಟಿಯವರು ಮೊದಲೇ ತೀರ್ಮಾನಿಸಿದ್ದರು. ಇದಕ್ಕಾಗಿ ಸುತ್ತಿಗೆ ಮತ್ತು ಹಗ್ಗವನ್ನು ಮೊದಲೇ ತಂದಿರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

















































error: Content is protected !!
Scroll to Top