ವಿಶ್ವಸಂಸ್ಥೆಯಲ್ಲೂ ಪ್ರಸಾರವಾಗಲಿದೆ ಮೋದಿಯ ಜನಪ್ರಿಯ ಕಾರ್ಯಕ್ರಮ
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಮನ್ ಕಿ ಬಾತ್‌ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಈ ನೂರನೇ ಸಂಚಿಕೆಯ ಮನ್ ಕೀ ಬಾತ್ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಮೂಲಕ ಐತಿಹಾಸಿಕ ಮತ್ತು ಅಭೂತಪೂರ್ವ ಎನ್ನಿಸಿಕೊಳ್ಳಲಿದೆ.
ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಆಯೋಗ ಈ ಬಗ್ಗೆ ಟ್ವೀಟ್ ಮಾಡಿ ‘ಯುಎನ್ ಪ್ರಧಾನ ಕಚೇರಿಯ ಟ್ರಸ್ಟ್ಶಿಪ್ ಕೌನ್ಸಿಲ್ ಚೇಂಬರ್ನಲ್ಲಿ ಏ.30ರಂದು ಪ್ರಧಾನಿ ಮೋದಿಯವರ ಮನ್ ಕೀ ಬಾತ್ ನೇರ ಪ್ರಸಾರಗೊಳ್ಳಲಿದೆ’ ಎಂದು ಹೇಳಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸಮುದಾಯ ಸಂಸ್ಥೆಗಳ ಜತೆಗೆ ನ್ಯೂಜೆರ್ಸಿಯಲ್ಲಿರುವ ಭಾರತೀಯ-ಅಮೆರಿಕನ್ ಮತ್ತು ಭಾರತೀಯ ಸಮುದಾಯದ ಸದಸ್ಯರಿಗೆ 1.30 ಕ್ಕೆ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ‘ಮನ್ ಕಿ ಬಾತ್’ನ 100 ನೇ ಸಂಚಿಕೆಯ ಪ್ರಸಾರವನ್ನು ಆಯೋಜಿಸುತ್ತಿದೆ.
2014ರ ಅಕ್ಟೋಬರ್ 3ರ ವಿಜಯ ದಶಮಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಶುರು ಮಾಡಿದ್ದಾರೆ. ಪ್ರತಿ ತಿಂಗಳ ಕೊನೇ ಭಾನುವಾರ ಅವರು ಈ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಾರ್ಯಕ್ರಮ ರಾಜಕೀಯೇತರವಾಗಿದ್ದು, ಆರೋಗ್ಯ, ಪರಿಸರ, ನೀರು ರಕ್ಷಣೆ, ಹವಾಮಾನ ವೈಪರೀತ್ಯ, ಸಾಮಾಜಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರ ಬಗ್ಗೆ ಜನರೊಂದಿಗೆ ಮೋದಿಯವರು ಮಾಹಿತಿ ಹಂಚಿಕೊಳ್ಳುತ್ತಾರೆ.
2014ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೋದಿಯವರು ಒಮ್ಮೆಯೂ ಇದನ್ನು ತಪ್ಪಿಸದೆ ನಡೆಸಿಕೊಂಡು ಬಂದಿದ್ದು ವಿಶೇಷವಾಗಿದೆ. ಪ್ರಧಾನಿ ಹುದ್ದೆಯ ಜವಾಬ್ದಾರಿಗಳು, ಪಕ್ಷಕ್ಕೆ ನೀಡಬೇಕಾದ ಗಮನ, ಪ್ರವಾಸ, ಸಭೆಗಳು ಏನೇ ಇರಲಿ, ಎಷ್ಟೆಲ್ಲ ಕೆಲಸಗಳೇ ಇರಲಿ ಮೋದಿಯವರು ತಮ್ಮನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವ ಮನ್ ಕೀ ಬಾತ್ನ್ನು ಒಮ್ಮೆಯೂ ಬಿಡಲಿಲ್ಲ. ಇಂತಹ ಮನ್ ಕೀ ಬಾತ್ ಏಪ್ರಿಲ್ 30ರಂದು ನೂರನೇ ಆವೃತ್ತಿಗೆ ಕಾಲಿಡುತ್ತಿರುವುದನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಸಂಭ್ರಮಿಸುತ್ತಿದೆ ಮತ್ತು ಅದಕ್ಕಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನೂ ನಡೆಸಿದೆ.
























