ಇದು ಕಾಂಗ್ರೆಸ್ ಪಕ್ಷದ ಸುಳ್ಳಿನ ಇನ್ನೊಂದು ಮುಖ – ಮಹಾವೀರ ಹೆಗ್ಡೆ
ಕಾರ್ಕಳ : ಕಾರ್ಕಳ ಕ್ಷೇತ್ರದ ಕಾಂಗ್ರೆಸ್ಸಿಗೆ ಕಾರ್ಯಕರ್ತರ ಅಭಾವ ತಲೆದೋರಿದೆ, ಮುಜುಗರದಿಂದ ಪಾರಾಗಲು ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಕರೆತಂದು ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆಗೊಳಿಸುವ ನಾಟಕವಾಡಿ ಅಬ್ಬರದ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಕಳೆದ ನಾಲ್ಕು ವರ್ಷ ಕಾರ್ಕಳದಲ್ಲಿ ಅಸ್ತಿತ್ವವನ್ನ ಹೊಂದಿರಲಿಲ್ಲ. ಮನೆಯೊಂದು ಹತ್ತಾರು ಬಾಗಿಲು ಎನ್ನುವ ಹಾಗೇ ಕಾಣೆಯಾಗಿ ದಿವಾಳಿತನಕ್ಕೆ ತಳ್ಳಲ್ಪಟ್ಟು, ಕಾಂಗ್ರೆಸನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಇದ್ದೇವೆ ಎನ್ನುವುದನ್ನು ತೋರ್ಪಡಿಸಿಕೊಳ್ಳಲು ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ. ಪಕ್ಷದಲ್ಲಿ ಅಳಿದುಳಿದವರನ್ನು ತಟಸ್ಥರಾಗಿದ್ದವರನ್ನು ಹುಡುಕಿ ಅವರನ್ನು ವೇದಿಕೆ ಹತ್ತಿಸಿ, ಪಕ್ಷದ ಧ್ವಜ ನೀಡಿ ಸೇರ್ಪಡೆಯ ನಾಟಕವಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ಸಿಗೆ ಕಾರ್ಯಕರ್ತರು ಸಿಗುತಿಲ್ಲ. ಅದಕ್ಕಾಗಿಯೇ ಅವರದೇ ಪಕ್ಷದ ಕಾರ್ಯಕರ್ತರನ್ನು ಮತ್ತೆ ಸೇರ್ಪಡೆಗೊಳಿಸುವ ಮೂಲಕ ಅಬ್ಬರದ ಪ್ರಚಾರಕ್ಕೆ ಪ್ರಯತ್ನಿಸುತ್ತಿದೆ. ಇದು ಆ ಪಕ್ಷಕ್ಕೆ ಎಂತಹ ದಯಾನೀಯ ಸ್ಥಿತಿ ಬಂದಿದೆ ಎನ್ನುವುದನ್ನು ತೋರಿಸುತ್ತಿದೆ. ಹಣ ಹಾಗೂ ಇತರೆ ಆಮಿಷ ಒಡ್ಡುವ ಮೂಲಕ ಪಕ್ಷ ಸೇರ್ಪಡೆ ಎಂಬ ಪ್ರಚಾರ ಮಾಡುತ್ತ ಜನರನ್ನು ಮರುಳು ಮಾಡುವ ಕಾಂಗ್ರೆಸ್ ಪಕ್ಷದ ನಾಯಕರ ಪ್ರಯತ್ನ ಫಲಿಸದು.
ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠೆಗೆ ಬದ್ಧರಾಗಿದ್ದು, ಅಪ್ಪಿ ತಪ್ಪಿಯೂ ಕಾಂಗ್ರೆಸ್ ಸೇರುವುದಾಗಲಿ ಅತ್ತ ಕಡೆ ಮುಖ ಮಾಡುವುದಿಲ್ಲ. ಆ ವಿಶ್ವಾಸ ನಮಗಿದೆ, ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತರ ಸೇರ್ಪಡೆ ಎಂದು ದಾರಿ ತಪ್ಪಿಸುವ ಕುತಂತ್ರ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿ ಬಗ್ಗೆ ಕ್ಷೇತ್ರದ ಜನತೆ ತಿಳಿದುಕೊಂಡಿದ್ದಾರೆ. ಕಾಂಗ್ರೆಸನ್ನೆ ನಂಬದಿರುವ ಈ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬುದನ್ನು ಯಾರೂ ನಂಬಲಾರರು. ಅಪಪ್ರಚಾರ, ಸುಳ್ಳು, ನಾಟಕಗಳಿಂದ ವಾಸ್ತವ ಮರೆ ಮಾಚಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಎನ್ನುವ ನಂಬಿಕೆ ಕಾಂಗ್ರೆಸ್‌ಗೆ ಬೇಡ. ಈ ಭ್ರಮೆಯಿಂದ ಪಕ್ಷದ ನಾಯಕರು ಇನ್ನಾದರೂ ಹೊರ ಬರಲಿ, ಇಲ್ಲಿ ತನಕ ಅಪಪ್ರಚಾರ ನಡೆಸಿದ್ದು ಸಾಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
























