ಹಿಜಾಬ್ ವಿವಾದಕ್ಕೂ ಇಲ್ಲ ಮಹತ್ವ-ಮೀಸಲಾತಿಯೊಂದೇ ಕೈಯಲ್ಲಿರುವ ಅಸ್ತ್ರ
ಕಾರ್ಕಳ : ಕಳೆದ ಕೆಲವಾರು ಚುನಾವಣೆಗಳಲ್ಲಿ ಕೋಮು ಹಿಂಸಾಚಾರ, ಧಾರ್ಮಿಕ ಸಂಘರ್ಷ ಇಂಥ ಭಾವನಾತ್ಮಕ ವಿಚಾರಗಳೇ ಪ್ರಚಾರದ ಪ್ರಮುಖ ಅಸ್ತ್ರಗಳಾಗಿದ್ದವು. ಆದರೆ ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಇಂಥ ವಿಷಯಗಳು ಉಲ್ಲೇಖಕ್ಕೆ ಬರುತ್ತಿಲ್ಲ ಎಂಬ ಅಂಶ ಗಮನಾರ್ಹವಾದದ್ದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲ ಪಕ್ಷಗಳು ಈಗ ಅಭಿವೃದ್ಧಿ ಮತ್ತು ಭ್ರಷ್ಟಚಾರದ ಬಗ್ಗೆ ಹೆಚ್ಚು ಮಾತನಾಡುತ್ತಿವೆ. ಕಾಂಗ್ರೆಸ್ ಅಂತೂ ಭಾವನಾತ್ಮಕ ಅಂಶಗಳ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಹೀಗಾಗಿ ಬಿಜೆಪಿ ಸಹ ಅನಿವಾರ್ಯವಾಗಿ ಇತರ ಅಂಶಗಳತ್ತ ಗಮನ ಹರಿಸುವಂತಾಗಿದೆ.
ಹಾಗೇ ನೋಡಿದರೆ ಇಡೀ ದೇಶದಲ್ಲಿ ಸದ್ದು ಮಾಡಿದ ಹಿಂದು ಕಾರ್ಯಕರ್ತರಾದ ಶಿವಮೊಗ್ಗದ ಹರ್ಷ ಮತ್ತು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣ, ಸುಪ್ರೀಂ ಕೋರ್ಟ್ ತನಕ ಹೋಗಿರುವ ಹಿಜಾಬ್ ವಿವಾದ ಈ ಸಲ ಚುನಾವಣಾ ಪ್ರಚಾರದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿತ್ತು. 2018ರ ಚುನಾವಣೆಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆಯೇ ಮುಖ್ಯ ವಿಷಯವಾಗಿ ಇದರ ಸಹಾಯದಿಂದ ಒಂದಷ್ಟು ಮತಗಳ ಧ್ರುವೀಕರಣ ಮಾಡುವಲ್ಲಿ ಬಿಜೆಪಿ ಸಫಲವಾಗಿತ್ತು. ಆದರೆ ಈ ಸಲ ಇಂಥ ಯಾವ ವಿಚಾರವೂ ಪ್ರಸ್ತಾವಕ್ಕೆ ಬರುತ್ತಿಲ್ಲ. ಸ್ಥಳೀಯವಾಗಿ ಕೆಲವರು ಇಂಥ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಪೋಸ್ಟ್‌ಗಳು ಹರಿದಾಡುತ್ತಿವೆ ಎನ್ನುವುದನ್ನು ಬಿಟ್ಟರೆ ನಾಯಕರು ವೇದಿಕೆಗಳಲ್ಲಿ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಪ್ರಚಾರದ ಈ ದಿಕ್ಕಿನಲ್ಲೇ ಸಾಗಬೇಕೆನ್ನುವುದು ಕಾಂಗ್ರೆಸ್‌ನ ರಣತಂತ್ರದ ಭಾಗವಾಗಿತ್ತು. ಇಂಥ ವಿಷಯಗಳು ಮುನ್ನೆಲೆಗೆ ಬಂದರೆ ಬಿಜೆಪಿಗೆ ಲಾಭವಾಗುತ್ತದೆ ಎನ್ನುವುದಕ್ಕೆ ಹಲವು ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಹೀಗಾಗಿ ಕಾಂಗ್ರೆಸ್ ಆರಂಭದಿಂದಲೇ ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಮಹತ್ವ ಕೊಡದೆ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿತು. ಸರಕಾರದ ಮೇಲೆ ನಿರಂತರವಾಗಿ ಶೇ.40 ಕಮಿಷನ್ ಆರೋಪ ಮಾಡುತ್ತಾ ಬಂತು. ಇವತ್ತಿಗೂ ಕಾಂಗ್ರೆಸ್ ಪ್ರತಿ ಪ್ರಚಾರ ಸಭೆಯಲ್ಲಿ ಈ ವಿಚಾರವನ್ನು ಉಲ್ಲೇಖಿಸದೆ ಬಿಡುವುದಿಲ್ಲ. ಹೀಗಾಗಿ ಬಿಜೆಪಿ ಕೂಡ ಅನಿವಾರ್ಯವಾಗಿ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಾಗಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಳಬೇಕಾಗಿದೆ. ಅಷ್ಟರಮಟ್ಟಿಗೆ ಪ್ರಚಾರದ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲಬೇಕು. ಆರೋಗ್ಯಕರ ಚುನಾವಣೆ ನಡೆಯಲು ಇದು ಬಹಳ ಅಗತ್ಯವಾದ ಅಂಶ.
ಹಾಗೆಂದು ಜಾತಿ ವಿಚಾರ ಆದ್ಯತೆಯಾಗುವುದನ್ನು ತಪ್ಪಿಸಲು ಕಾಂಗೆಸ್ ಮತ್ತು ಬಿಜೆಪಿಯಿಂದ ಸಾದ್ಯವಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆಯಾಗಿರುವುದೇ ಜಾತಿ ಆಧಾರದ ಮೇಲೆ. ಬಹುತೇಕ ಕ್ಷೇತ್ರಗಳಲ್ಲಿ ಜಾತಿಯ ಮತಗಳ ಕುರಿತಾದ ಲೆಕ್ಕಾಚಾರ ಇದ್ದೇ ಇದೆ. ಇವೆಲ್ಲಕ್ಕಿಂತ ಮೇಲಾಗಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಲಿಂಗಾಯತ ಸಮುದಾಯದ ಅಸ್ಮಿತೆಯ ವಿಚಾರವನ್ನು ಮುನ್ನೆಲೆಗೆ ತಂದಿದೆ. ಬಿಜೆಪಿಯ ಬಲಿಷ್ಠ ವೋಟ್‌ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಬೇರೊಂದು ರೀತಿಯಲ್ಲಿ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯಂಥ ಟಿಕೆಟ್ ನಿರಾಕರಿಸಲ್ಪಟ್ಟ ಬಿಜೆಪಿಯ ಲಿಂಗಾಯತ ನಾಯಕರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿ ಟಿಕೆಟ್ ನೀಡಿರುವುದು ಮುತ್ಸದ್ದಿ ರಾಜಕೀಯ ನಡೆ ಅಲ್ಲ ಎನ್ನುವುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಆದರೆ ಅವರಿಗೆ ಮುತ್ಸದ್ದಿತನಕ್ಕಿಂತಲೂ ಈಗ ಬೇಕಾಗಿರುವುದು ಗೆಲುವು. ಇದನ್ನು ಕೌಂಟರ್ ಮಾಡಲು ಬಿಜೆಪಿ ಕೂಡ ಲಿಂಗಾಯತ ಸಮುದಾಯವನ್ನು ಇನ್ನಿಲ್ಲದಂತೆ ಓಲೈಸುತ್ತಿದೆ. ಹೀಗೆ ಎರಡೂ ಪಕ್ಷಗಳ ಲಿಂಗಾಯತ ಮೇಲಾಟ ಅಂತಿಮವಾಗಿ ಫಲಿತಾಂಶದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನವುದು ಆ ಮೇಲಿನ ವಿಚಾರ. ಆದರೆ ಜಾತಿಯನ್ನು ಮೀರಿ ರಾಜಕೀಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಎರಡೂ ಪಕ್ಷಗಳು ಒಪ್ಪಿಕೊಂಡಂತಾಗಿದೆ.
ಮೀಸಲಾತಿ ಅಸ್ತ್ರ

ಬಿಜೆಪಿ ಕೈಯಲ್ಲಿ ಈ ಸಲ ಇರುವುದು ಮೀಸಲಾತಿ ಅಸ್ತ್ರ. ಮುಸ್ಲಿಮರ ಶೇ.4 ಹೆಚ್ಚುವರಿ ಮೀಸಲಾತಿ ರದ್ದುಪಡಿಸಿ ಅದನ್ನು ಲಿಂಗಾಯತ ಸಮುದಾಯಕ್ಕೆ ಹಂಚಿ ಆ ಸಮುದಾಯವನ್ನು ಖುಷಿಪಡಿಸಲು ಹೊರಟಿದೆ ಬಿಜೆಪಿ. ಸದ್ಯಕ್ಕೆ ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಹೆಚ್ಚೇನೂ ಎರಡೂ ಪಕ್ಷಗಳು ಹೇಳುವಂತಿಲ್ಲ. ಆದರೆ ಈ ಸಲದ ಚುನಾವಣೆಯಲ್ಲಿ ಮೀಸಲಾತಿ ಮುಖ್ಯ ವಿಚಾರವಾಗಿರುವುದು ನಿಚ್ಚಳ.
ಪ್ರತಿ ಬಾರಿ ಕೋಮು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡುತ್ತಿತ್ತು. ಆದರೆ, ಈ ಬಾರಿ, ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರಳಿ ಒದಗಿಸುವುದನ್ನು ಬಿಟ್ಟರೆ, ಬೇರಾವುದೇ ರೀತಿಯ ಕೋಮು ವಿಷಯಗಳ ಕುರಿತು ಕಾಂಗ್ರೆಸ್ ತುಟಿಬಿಚ್ಚುತ್ತಿಲ್ಲ. ಇಷ್ಟರಿಂದಲೇ ಕಾಂಗ್ರೆಸ್ ಮುಸ್ಲಿಮ್ ಮತಗಳನ್ನು ಓಲೈಸಬೇಕಾಗಿದೆ. ಬಿಜೆಪಿ ನಾವು ನಿಮಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಹೇಳಬೇಕಾಗಿದೆ.
























