ಕಾರ್ಕಳದಲ್ಲಿ ದ್ವೇಷ ಮತ್ತು ವ್ಯಕ್ತಿ ನಿಂದನೆಯ ರಾಜಕಾರಣ ಪ್ರಾರಂಭ ಮಾಡಿದ್ದೇ ಸುನಿಲ್ ಕುಮಾರ್ – ಶುಭದ ರಾವ್

ಕಾರ್ಕಳ : ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರ ಮೇಲೆ ಅನುಕಂಪ ತೋರಿಸಿ, ಸಾರ್ವಜನಿಕರ ಮನಸ್ಸನ್ನು ಗೆಲ್ಲಲು ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ನಡೆಸುತ್ತಿರುವ ಪ್ರಯತ್ನ, ಕೇವಲ ಚುನಾವಣೆ ಗಿಮಿಕ್ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2004ರ ಚುನಾವಣೆಯಲ್ಲಿ ಹೆಬ್ರಿಯ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಮಾಜಿ ಶಾಸಕರ ಕುಟುಂಬಿಕರ ಮೇಲೆ ಹೊರಿಸಿ, ಚುನಾವಣೆ ಗೆದ್ದಿದ್ದರು. ಗೆದ್ದ ಅನಂತರ ಆರೋಪಿಗಳಿಗೆ ಪರೋಕ್ಷ ರಕ್ಷಣೆ ನೀಡಿದಂತೆ ಈ ಕೊಲೆ ಪ್ರಕರಣಕ್ಕೆ ಬಿ-ರಿಪೋರ್ಟ್ ಹಾಕಿಸಿ ಪ್ರಕರಣಕ್ಕೆ ಅಂತ್ಯ ಹಾಡಲಾಯಿತು. ಮುಂದೆ ನೊಂದ ಸಂತ್ರಸ್ತ ಕುಟುಂಬದತ್ತಾ ಮುಖ ಮಾಡದೇ ರಾಜಕೀಯ ಬೇಳೆ ಬೇಯಿಸಿಕೊಂಡ ಶಾಸಕರು, ಅಂದಿನ ಚುನಾವಣೆ ಸಂದರ್ಭ ಎಚ್. ಗೋಪಾಲ ಭಂಡಾರಿ ಅವರ ಕುಟುಂಬಿಕರಿಂದಲೇ ಈ ಕೊಲೆ ನಡೆದಿದೆ ಎಂದು ಆರೋಪಿಸಿ, ಆ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವುದನ್ನು ಅವರ ಪತ್ನಿ ಮಕ್ಕಳು ಮತ್ತು ಕುಟುಂಬಿಕರು ಮರೆತಿಲ್ಲ. ಮುಂದೆಯೂ ಮರೆಯುವುದಿಲ್ಲ. ಎಚ್. ಗೋಪಾಲ ಭಂಡಾರಿ ಅವರ ತಾಯಿ ಗಿರಿಜಾ ಭಂಡಾರಿ ಅವರು ಕೃಷಿಕರಾಗಿದ್ದು, ಫಲಾನುಭವಿಯಾಗಿ ಸಹಜವಾಗಿ ಸರಕಾರದಿಂದ 30 ಸಾವಿರ ರೂ. ಟಿಲ್ಲರ್ ಪಡೆದಾಗ, ಅಲ್ಲೂ ಅಪಪ್ರಚಾರ ನಡೆಸಿ ಮಾನಸಿಕ ಕಿರುಕುಳ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಹೆಬ್ರಿಯಲ್ಲಿ 12 ಲಕ್ಷ ರೂ. ಮನೆ ನಿರ್ಮಾಣ ಮಾಡಿದಾಗ, ಹಿಂದೆ ಹೆಬ್ರಿ ಪೇಟೆಯಲ್ಲಿ 1 ಸೆಂಟ್ಸ್ ಕಮರ್ಷೀಯಲ್ ಸೈಟ್ ಪಡೆದುಕೊಂಡಿರುವುದನ್ನು ಕೂಡಾ ಅಪಪ್ರಚಾರದ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದರು. ಅಷ್ಟೇ ಏಕೆ ? ಅವರ ತಾಯಿ ಗಿರಿಜಾ ಭಂಡಾರಿ ಅವರು ಆಕಸ್ಮಿಕವಾಗಿ ಅಗಲಿದ ಸಂದರ್ಭ, ಅವರ ತಾಯಿಯ ಸಾವಿಗೂ ಮಾಜಿ ಶಾಸಕರೇ ಕಾರಣ ಎಂದು 2013ರ ಸಂದರ್ಭದಲ್ಲೂ ಚುನಾವಣೆ ಪ್ರಚಾರ ನಡೆಸಿ, ಗೆಲುವು ಸಾಧಿಸಿದ್ದರು. ಹೀಗೆ ಒಂದಲ್ಲಾ ಒಂದು ಸುಳ್ಳು ಆರೋಪವನ್ನು ಮಾಡುತ್ತಾ, ಪ್ರಚಾರ ಗಿಟ್ಟಿಸಿಕೊಂಡು ನಿರಂತರ ಮಾಜಿ ಶಾಸಕರ ಕುಟುಂಬವನ್ನು ಕಣ್ಣೀರಿನಲ್ಲಿ ತೇಲುವಂತೆ ಮಾಡಿದ ಶಾಸಕರು, ಮುಂದೆ ಮಾಜಿ ಶಾಸಕರು ನಮ್ಮ ಜೊತೆ ಇಲ್ಲ ಎಂದಾಗ, ಅನುಕಂಪವನ್ನು ವ್ಯಕ್ತಪಡಿಸಿ ಪ್ರಚಾರದ ಅಸ್ತ್ರವನ್ನಾಗಿಸುತ್ತಿರುವುದನ್ನು ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ಅರಿತುಕೊಂಡಿದ್ದಾರೆ. ಕಾರ್ಕಳದಲ್ಲಿ ದ್ವೇಷ ಮತ್ತು ವ್ಯಕ್ತಿ ನಿಂದನೆಯ ರಾಜಕಾರಣ ಆರಂಭಗೊಂಡಿರುವುದೇ ಸುನಿಲ್ ಕುಮಾರ್ ಅವರಿಂದ. ಅದಕ್ಕೆ ಮೊದಲ ಬಲಿ ನಮ್ಮ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿಯವರು ಎನ್ನುವುದು ನಮಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಇಂದು ಕಾರ್ಕಳ ಕ್ಷೇತ್ರಾದಾದ್ಯಂತ ಭ್ರಷ್ಟಾಚಾರ, ಬೇನಾಮಿ ಆಸ್ತಿ ಗಳಿಕೆ ಹಾಗೂ ದುರ್ನಡತೆಯಿಂದ ಮತದಾರರ ನಂಬಿಕೆಯನ್ನು ಕಳೆದುಕೊಂಡು ಹತಾಶರಾದ ಶಾಸಕರು, ಸೋಲಿನ ಭೀತಿಯಿಂದ ತಪ್ಪಿಸಿಕೊಳ್ಳಲು, ಅಲ್ಲದೆ ಮಾಜಿ ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಹತಾಶೆಗೊಂಡು, ತಪ್ಪಿನ ಅರಿವಾಗಿ ಪಶ್ಚತ್ತಾಪಪಟ್ಟು ತಪ್ಪನ್ನು ತಿದ್ದುವ ಪ್ರಯತ್ನಕ್ಕೆ ಈ ನಾಟಕ ಮುಂದುವರೆಸಿದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಇತ್ತೀಚೆಗೆ ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ಕೋಟ್ಯಾನ್ ಅವರು, ಸಾಮಾಜಿಕ ಜಾಲತಾಣದಲ್ಲಿ ಗೋಪಾಲ ಭಂಡಾರಿಯವರ ಜಾತಿ ಕಸುಬನ್ನು ಅವಹೇಳನ ಮಾಡಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳುವ ತಾಕತ್ ನಿಮಗಿದೆಯೇ ? ಎನ್ನುವುದು ನನ್ನ ಪ್ರಶ್ನೆ.
ಈಗ ನಿಮ್ಮದೇ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮೋದ್ ಮುತಾಲಿಕ್ ಮತ್ತು ಮಮತಾ ಹೆಗ್ಡೆ ಅವರು ಬಿಜೆಪಿಯಿಂದಲೇ ಟಿಕೆಟ್ ಆಕಾಂಕ್ಷಿಯಾಗಿ ಕಾರ್ಕಳದಲ್ಲಿ ಸ್ಪರ್ಧೆಗೆ ಬಯಸಿದ್ದು ಏಕೆ ? ನಿಮ್ಮ ಭ್ರಷ್ಟಾಚಾರ ಮತ್ತು ದುರಹಂಕಾರಕ್ಕೆ ಕೊನೆ ಹಾಡುವ ಉದ್ದೇಶ ಅವರದ್ದಲ್ಲವೇ ? ನಿಮ್ಮ ವರ್ತನೆಯಿಂದ ಬೇಸತ್ತ ಕಾರ್ಯಕರ್ತರ ರಕ್ಷಣೆಗಾಗಿ ಎನ್ನುವ ವಾಸ್ತವವನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಗುರುಗಳು ನಿಮ್ಮ ಭ್ರಷ್ಟಾಚಾರದ ಕುರಿತಂತೆ ದಾಖಲೆ ಸಹಿತ ಬಿಡುಗಡೆ ಮಾಡುತ್ತಿದ್ದರೂ, ನೀವು ಮೌನರಾಗಿರುವುದು
ಏನನ್ನು ಸೂಚಿಸುತ್ತದೆ ? ಸರಕಾರದ ಸಿಮೆಂಟ್ ನೀವು ಕದ್ದಿದ್ದೀರಿ ಎಂದು ನಿಮ್ಮದೇ ಕಾರ್ಯಕರ್ತರು ಬಹಿರಂಗವಾಗಿ ವೇದಿಕೆಯಲ್ಲಿ ಹೇಳಿಕೊಳ್ಳುತ್ತಿದ್ದರೂ, ಅದಕ್ಕೂ ಸಮರ್ಥವಾದ ಪ್ರತಿಕ್ರಿಯೆ ನೀಡಲು ನೀವು ಏಕೆ ಅಸಮರ್ಥರಾಗಿದ್ದೀರಿ ? ಎಂದು ಶುಭದ ರಾವ್‌ ಪ್ರಶ್ನಿಸಿದರು.



















































































error: Content is protected !!
Scroll to Top