ಕಾರ್ಕಳ : ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೊಡಮಾಡುವ ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ನ್ಯೂಸ್ ಕಾರ್ಕಳದ ವರದಿಗಾರರಾಗಿರುವ ನಳಿನಿ ಎಸ್. ಸುವರ್ಣ ಭಾಜನರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ಪ್ರತಿ ವರ್ಷ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ, ಅವರಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಮಾಮ್ ಇನ್‌ಸ್ಪೈರ್ ಆವಾರ್ಡ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಕಳೆದ ಬಾರಿಯ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಕಾರ್ಕಳದ ನಳಿನಿ ಎಸ್. ಸುವರ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಪದವಿ ವಿಭಾಗದ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿರುವ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ‘ಮಾಮ್ ಇನ್‌ಸ್ಪೆರ್’ ಪ್ರಶಸ್ತಿ ನೀಡಲಾಗುತ್ತದೆ.
2020- 21ರ ಪ್ರಶಸ್ತಿಯು ಎಸ್‌ಡಿಎಂ ಕಾಲೇಜು ಉಜಿರೆಯ ರಶ್ಮಿ ಯಾದವ್, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಯಕ್ಷಿತಾ, ಎಂಜಿಎಂ ಕಾಲೇಜಿನ ನವ್ಯಶ್ರೀ ಶೆಟ್ಟಿ (ಪ್ರೋತ್ಸಾಹಕ ಪ್ರಶಸ್ತಿ) ತಮ್ಮದಾಗಿಸಿಕೊಂಡಿದ್ದಾರೆ. ಸ್ನಾತಕೋತ್ತರ ವಿಭಾಗದದಲ್ಲಿ ಎಸ್‌ಡಿಎಂ ಕಾಲೇಜು ಉಜಿರೆಯ ಚೈತ್ರಾ ಪ್ರಥಮ ಹಾಗೂ ಎಸ್‌ಡಿಎಂ ಕಾಲೇಜಿನ ಸ್ವಸ್ತಿಕ್ ಕನ್ಯಾಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

2021-22ರ ಪದವಿ ವಿಭಾಗದ ಮಾಮ್ ಇನ್‌ಸ್ಪೆರ್ ಪ್ರಶಸ್ತಿಯು ಎಸ್‌ಡಿಎಂ ಕಾಲೇಜು ಉಜಿರೆಯ ಶ್ಯಾಮ ಪ್ರಸಾದ್ (ಪ್ರಥಮ), ಆಳ್ವಾಸ್ ಕಾಲೇಜು ಮೂಡಬಿದ್ರಿಯ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಇಂದುಧರ ಹಳೆಯಂಗಡಿ, (ಪ್ರಥಮ), ನಳಿನಿ ಎಸ್. ಸುವರ್ಣ (ದ್ವಿತೀಯ) ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮುಂದಿನ ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
























