ಏ.25 : ಶೂನ್ಯ ನೆರಳಿನ ದಿನ

ನಿಮ್ಮ ನೆರಳು ನಿಮಗೇ ಕಾಣಿಸದ ಪ್ರಾಕೃತಿಕ ಚಮತ್ಕಾರ

ಉಡುಪಿ: ಉಡುಪಿಯಲ್ಲಿ ಏ.25 ಶೂನ್ಯ ನೆರಳಿನ ದಿನವಾಗಿರುತ್ತದೆ. ಅಂದರೆ ಅಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ನೆರಳು ನಿಮಗೇ ಕಾಣಿಸುವುದಿಲ್ಲ. ರಾಜ್ಯದಲ್ಲಿ ಏ.22 ರಿಂದ ಮೇ 11 ರವರೆಗೆ ಶೂನ್ಯ ನೆರಳಿನ ದಿನಗಳಿದ್ದು, ಈ ಪ್ರಾಕೃತಿಕ ಚಮತ್ಕಾರ ಉಡುಪಿಯಲ್ಲಿ ಏ.25ರಂದು ಮತ್ತು ಮಂಗಳೂರಿನಲ್ಲಿ ಏ.24ರಂದು ಸಂಭವಿಸಲಿದೆ.
ಮಂಗಳೂರಿನ ಜನರು ಏ.24 ರಂದು ಮಧ್ಯಾಹ್ನ 12.28ಕ್ಕೆ ಮತ್ತು ಏ.25ರಂದು ಉಡುಪಿಯಲ್ಲಿ ಮಧ್ಯಾಹ್ನ 12.29ಕ್ಕೆ ಶೂನ್ಯ ನೆರಳಿನ ವಿದ್ಯಮಾನ ವೀಕ್ಷಿಸಬಹುದು.
ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ಸೂರ್ಯನು ತಲೆಯ ಮೇಲೆ ನಿಖರವಾಗಿ ಇರುವಾಗ ನಮ್ಮ ನೆರಳು ನೇರವಾಗಿ ಕಾಲ ಕೆಳಗಿರುತ್ತದೆ. ನಾವು ನಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ಗೋಚರಿಸುವುದಿಲ್ಲ. ಇದನ್ನು ಖಗೋಳ ವಿಜ್ಞಾನದಲ್ಲಿ ‘ಶೂನ್ಯ ನೆರಳು’ ಎನ್ನುತ್ತಾರೆ.
ಶೂನ್ಯ ನೆರಳನ್ನು ಗಮನಿಸಲು ಸಿಲಿಂಡರ್‌, ಕ್ಯೂಬ್‌ ಅಥವಾ ಶಂಕುವಿನಂತೆ ಮೇಲಿನಿಂದ ಕೆಳಗೆ ಸಮಾನ ಅಥವಾ ಹೆಚ್ಚಾದ ಅಗಲ ಹೊಂದಿರಬೇಕು. ಮನುಷ್ಯರ ದೇಹದ ಮೇಲ್ಭಾಗವು ಕೆಳಭಾಗಕ್ಕಿಂತ ವಿಶಾಲವಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಉಂಟು ಮಾಡುತ್ತದೆ.
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಏ.25ರಂದು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಾರ್ವಜನಿಕರಿಗಾಗಿ ಮಧ್ಯಾಹ್ನ 12.15ರಿಂದ ಈ ವಿದ್ಯಮಾನದ ಪ್ರದರ್ಶನ ಆಯೋಜಿಸಿದೆ.



















































































error: Content is protected !!
Scroll to Top