ಕಾರ್ಕಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ

ಕಾರ್ಕಳ : ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು 2,500 ಕೋಟಿ ರೂ., ಮಂತ್ರಿಯಾಗಲು 100 ಕೋಟಿ ರೂ. ನೀಡಬೇಕಾಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಹಾಗೂ ಹಿರಿಯ ಕಾಂಗ್ರೆಸ್‌ ಧುರೀಣ ಬಿ. ಕೆ. ಹರಿಪ್ರಸಾದ್‌ ಹೇಳಿದರು.

ಅವರು ಎ. 20ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ಸಮಾನತೆ ಸಾರಿದ ಗಾಂಧೀಜಿ ಕೊಂದ ನಾಥೂರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ. ಸಾವರ್ಕರ್ ಹಿಂದೂ ಬೇರೆ ಹಿಂದುತ್ವ ಬೇರೆ ಎಂದು ಆವಾಗಲೇ ಹೇಳಿದ್ದರು. ಬಿಜೆಪಿಯವರು ಈವರೆಗೆ ದೇಶಕ್ಕಾಗಿ ಪ್ರಾಣ ತೆತ್ತ ಒಂದೇ ಒಂದು ಘಟನೆ ಹೇಳಲಿ. ಕಾಶ್ಮೀರ ಬಗ್ಗೆ ಮಾತನಾಡ್ತಾರೆ. ಅಲ್ಲಿ ಯಾರು ಪ್ರಾಣ ತೆತ್ತಿದ್ದಾರೆ ಅವರಲ್ಲಿ ಕೇಳಬೇಕೆಂದು ಹೇಳಿದರು.

ದ.ಕ. ಜಿಲ್ಲೆಗೆ ಮಾಡಿದ ಅಪಮಾನ
ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್‌ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ‌ರುವುದರಿಂದ ಇದೀಗ ವಿಜಯ ಬ್ಯಾಂಕ್‌ ಎಲ್ಲಿದೆಯೆಂದು ಟಾರ್ಚ್ ಹಾಕಿ ಹುಡುಕುವಂತಾಗಿದೆ. ಇದು ಬಂಟರಿಗೆ ಮಾತ್ರವಲ್ಲ, ಅವಿಭಜಿತ ದ.ಕ ಜಿಲ್ಲೆಗೆ ಮಾಡಿದ ಅವಮಾನವೆಂದು ಹರಿಪ್ರಸಾದ್‌ ಬಣ್ಣಿಸಿದರು.

ಮೋದಿ ದೇವ ಮಾನವವೇ ?
ಪ್ರಾಕೃತಿಕ ವಿಕೋಪ ಸಂದರ್ಭ ರಾಜ್ಯದಲ್ಲಿ ಒಮ್ಮೆಯಾದರೂ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆಯೇ ? ಚುನಾವಣೆ ಸಂದರ್ಭ ಮಾತ್ರ ಮೋದಿಗೆ ಕರ್ನಾಟಕದ ನೆನಪಾಗುತ್ತಿದೆ. ರಾಜ್ಯಕ್ಕೆ ಪ್ರಧಾನಿ ಕೊಡುಗೆ ಏನಿಲ್ಲ ಎಂದು ಹರಿಪ್ರಸಾದ್‌ ಟೀಕಿಸಿದ ಹರಿಪ್ರಸಾದ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಒಂದು ಕಡೆ ತಮ್ಮ ಭಾಷಣದಲ್ಲಿ ಬಿಜೆಪಿಯನ್ನು ಬೆಂಬಲಿಸದೇ ಇದ್ದಲ್ಲಿ ಪ್ರಧಾನಿ ಆಶೀರ್ವಾದ ಸಿಗಲ್ಲ ಹೇಳಿದ್ದಾರೆ. ಮೋದಿ ಏನು ದೇವ ಮಾನವನೇ ಎಂದು ಪ್ರಶ್ನಿಸಿದರು.

ಕರ್ನಾಟಕವೇ ಮಾಡೆಲ್‌
ಸಂಸದೆ ಪ್ರಜ್ಞಾಸಿಂಗ್ ಮನೆಯಲ್ಲಿರುವ ಚಾಕು ಚೂರಿ ಹರಿತವಾಗಿಡಿ ಎಂದು ನೀಡಿದರೂ ಪೊಲೀಸರು ಅವರ ವಿರುದ್ಧ ಕ್ರಮಕೈಗೊಂಡಿಲ್ಲ. ಪೊಲೀಸರು ಸಂವಿಧಾನಕ್ಕೆ ನಿಷ್ಠರಾಗಿಯಬೇಕೆ ಹೊರತು ಪಕ್ಷಕ್ಕಲ್ಲ. ಬಿಜೆಪಿಯವರು ಗುಜರಾತ್‌ ಮಾಡೆಲ್‌ ಎಂದು ಹೇಳುತ್ತಿದ್ದಾರೆ. ಆದರೆ, ದ.ಕ. ಜಿಲ್ಲೆಯ ದೇರಳಕಟ್ಟೆಯ ಒಂದು ಗ್ರಾಮದಲ್ಲಿರುವ ಮೆಡಿಕಲ್‌ ಕಾಲೇಜುಗಳು ಇಡೀ ಗುಜರಾತ್‌ ರಾಜ್ಯದಲ್ಲಿಲ್ಲ. ಬ್ಯಾಂಕಿಂಗ್‌, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಪ್ರಗತಿ ಹೊಂದಿರುವ ಕರ್ನಾಟಕವೇ ಎಲ್ಲ ರಾಜ್ಯಗಳಿಗೂ ಮಾದರಿ ಎಂದು ವಿಧಾನ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ರಸ್ತೆ, ಸೇತುವೆ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಬೇಡಿ, ಲವ್‌ ಜಿಹಾದ್‌ ಕುರಿತು ಮಾತನಾಡಿ ಹೇಳುತ್ತಾರೆ. ಅವರು ಕಾಲೇಜು ಹೋಗಿಲ್ಲ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್‌ ಹಾರಿಹಾಯ್ದರು.

ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮರೋಳಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮತೀಯ ಕಾರಣಕ್ಕಾಗಿ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಅವರು ಬಿಜೆಪಿಯಿಂದ ಪ್ರಯೋಜನ ಪಡೆದುಕೊಂಡವರು ಎಂದು ಸುನಿಲ್‌ ಕುಮಾರ್‌ ಹೇಳುತ್ತಾರೆ. ಆದರೆ, ಬಿಜೆಪಿ ಸರಕಾರವೇ ಮುನಿಯಾಲು ಅವರ ಋಣದಲ್ಲಿದೆ. ಅವರಿಗಿನ್ನೂ 36 ಕೋಟಿ ರೂ. ಸರಕಾರದಿಂದ ಬರಬೇಕಿದೆ ಎಂದರು.

ಶಿಷ್ಯನ ಸೋಲಿಗೆ ಹಠ ಹಿಡಿದ ಗುರು
ಶಿಷ್ಯನ ಸೋಲಿನ್ನು ಇಡೀ ವಿಶ್ವದಲ್ಲಿ ಯಾವೊಬ್ಬ ಗುರುವೂ ಬಯಸಲಾರ. ಶಿಷ್ಯನನ್ನು ಸೋಲಿಸಬೇಕೆಂದು ಕಾರ್ಕಳಕ್ಕೆ ಗುರುವೇ ಬಂದಿರುತ್ತಾರೆ. ಶಿಷ್ಯ ಸುನಿಲ್‌ ಕುಮಾರ್‌ ಬೇನಾಮಿ ಆಸ್ತಿ ಪಟ್ಟಿಯನ್ನು ಮುತಾಲಿಕ್‌ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮರೋಳಿ ಹೇಳಿದರು.

ಸುನಿಲ್ ಕುಮಾರ್ ಬೇಡಿ ಚುನಾವಣೆ ಗೆಲ್ಲುತ್ತಾ ಬಂದವರು. ಎಂಟೆಕ್ ಪದವೀಧರರಾಗಿರುವ ಉದಯ ಕುಮಾರ್ ಶೆಟ್ಟಿ ದಾನ ಮಾಡುತ್ತ ಬಂದವರು. ಈ ಬಾರಿ ಅವರನ್ನು ಕ್ಷೇತ್ರದ ಜನತೆ ಗೆಲ್ಲಿಸಿಕೊಡಬೇಕೆಂದು ಮರೋಳಿ ವಿನಂತಿಸಿದರು.

ಆದರ್ಶ ಶಾಸಕನಾಗಿ ಕಾರ್ಯನಿರ್ವಹಿಸುವೆ – ಉದಯ ಶೆಟ್ಟಿ
ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಬಾರಿ 140 ಸೀಟ್ ಖಚಿತ. ಅದರಲ್ಲಿ ಕಾರ್ಕಳವೂ ಒಂದಾಗಬೇಕು. ಸರ್ವಧರ್ಮದ ಸಮನ್ವಯತೆಗಾಗಿ, ಜನತೆಯ ಒಳಿತಿಗಾಗಿ ಈ ಬಾರಿ ಕಾಂಗ್ರೆಸ್‌ ಗೆಲುವಾಗಬೇಕು. ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಆದರ್ಶ ಶಾಸಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಅಭ್ಯರ್ಥಿ ಉದಯ ಶೆಟ್ಟಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್‌ ಬಡವರ ಪರವಾಗಿರುವ ಪಕ್ಷ. ಕಾಂಗ್ರೆಸ್‌ ಬಿಡುಗಡೆಗೊಳಿಸಿದ ಗ್ಯಾರಂಟಿ ಕಾರ್ಡ್‌ಗೆ ವಾರಂಟಿ ಇಲ್ಲವೆಂದು ಬಿಜೆಪಿ ಹೇಳುತ್ತಿದೆ. 15 ಲಕ್ಷ ರೂ. ಬಂದಿದೆಯಾ ? 2 ಸಾವಿರ ರೂ.ಗೆ ಮರಳು, 50 ರೂ.ಗೆ ಪೆಟ್ರೋಲ್‌ ಸಿಗುತ್ತಿದೆಯಾ ಎಂದು ಬಿಜೆಪಿಯವರನ್ನೇ ಕೇಳಬೇಕು. ಕಾಂಗ್ರೆಸ್‌ ನೀಡಿದ ನಾಲ್ಕು ಆಶ್ವಾಸನೆಯನ್ನು ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ಪಕ್ಷ ಸೇರ್ಪಡೆ
ಕಾರ್ಕಳ ವಿಧಾನಸಭಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯ ಅನೇಕ ಹಿರಿಯರು ಹಾಗೂ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು, ಸಾಣೂರು ಗ್ರಾ. ಪಂ. ಮಾಜಿ ಅಧ್ಯಕ್ಷೆ ರಾಜೇಶ್ವರಿ ರವಿಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರಹಾಸ್ ಸುವರ್ಣ, ಮುನಿಯಾಲು ಬಿಲ್ಲವ‌ ಸಂಘದ ಸ್ಥಾಪಾಕಾಧ್ಯಕ್ಷ ಬಿಜೆಪಿಯ ಹಿರಿಯರಾಗಿದ್ದ ಆನಂದ ಪೂಜಾರಿ, ಉದ್ಯಮಿ ಕಾಂತಾವರ ಉದಯ್ ಶೆಟ್ಟಿ, ಕುಕ್ಕುಂದೂರು ಪಂಚಾಯತ್ ಸದಸ್ಯ ಹಾಗೂ ನ್ಯಾಯ ಸಮಿತಿ ಅಧ್ಯಕ್ಷ ರಮೇಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ, ಅಭ್ಯರ್ಥಿ ಉದಯ ಶೆಟ್ಟಿ ಪಕ್ಷದ ಧ್ವಜ ಹಸ್ತಾಂತರಿಸಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.

ಪ್ರಾಸ್ತವಿಕ ಮಾತುಗಳನ್ನಾಡಿದ ಶುಭದ ರಾವ್‌, ಗೋಪಾಲ ಭಂಡಾರಿಯವರ ಶಾಪ ಬಿಜೆಪಿಗೆ ತಟ್ಟದಿರದು. ಸುಚೇತಾ ಶೆಟ್ಟಿ ಕೊಲೆಯನ್ನು ರಾಜಕೀಯ ಅಸ್ತ್ರವಾಗಿಸಿದ ಬಿಜೆಪಿ ಬಳಿಕ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟಿಲ್ಲ. ಕೋವಿಡ್ ಸಂದರ್ಭ ಸರಕಾರದಿಂದ ಬಿಡುಗಡೆಯಾದ ಆಹಾರ ಕಿಟ್ ನಲ್ಲೂ ಅವ್ಯವಹಾರವಾಗಿದೆ ಎಂದರು.

ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಕಳ ಬ್ಲಾಕ್‌ ಕಾಂಗ್ರೆಸ್ ಅ‍ಧ್ಯಕ್ಷ ಸದಾಶಿವ ದೇವಾಡಿಗ, ಕಾಂಗ್ರೆಸ್‌ ಮುಖಂಡರಾದ ಡಿ.ಆರ್.‌ ರಾಜು, ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಶುಭದಾ ರಾವ್‌ ಸ್ವಾಗತಿಸಿ, ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನಕ್ರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

ಕಾಂಗ್ರೆಸ್‌ ಸೇರ್ಪಡೆ
















































error: Content is protected !!
Scroll to Top