ಗೆಲುವಿನ ಅಂತರ 50 ಸಾವಿರ ದಾಟಬೇಕು – ಮಹೇಶ್ ಶೆಟ್ಟಿ
ಹಿರಿತನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಕ್ಷೇತ್ರದ ಜನತೆ ಮೇಲಿದೆ – ಪ್ರಮೋದ್ ಮಧ್ವರಾಜ್
ಕಾರ್ಕಳ : 2018ರ ಚುನಾವಣೆ ಬಳಿಕ ಇದೀಗ ಕಾಂಗ್ರೆಸ್ ಜನತೆಯನ್ನು ಸಂಪರ್ಕಿಸುತ್ತಿದೆ. ಕಾರ್ಕಳಕ್ಕೆ ಯಾವೊಂದು ಕೊಡುಗೆ ನೀಡದ, ಜನರ ಕಷ್ಟ ಸುಖಗಳಿಗೆ ಸ್ಪಂದಿಸದ ಕಾಂಗ್ರೆಸ್ ಚುನಾವಣೆಯ ಸಂದರ್ಭ ಮಾತ್ರ ಪ್ರತ್ಯಕ್ಷವಾಗುತ್ತಿದೆ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಟೀಕಿಸಿದರು. ಅವರು ಏ.19 ರಂದು ಕುಕ್ಕುಂದೂರು ಗ್ರಾ. ಪಂ. ಮೈದಾನದಲ್ಲಿ ಅವರ ನಾಮಪತ್ರ ಸಲ್ಲಿಕೆಯ ಸಲುವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೋನದ ಸಂಕಷ್ಟ ಕಾಲದಲ್ಲಿ ಮುಂಬೈ – ಪುಣೆಯ ನಮ್ಮ ಬಂಧುಗಳು ಊರಿಗೆ ಬರುವಂತೆ ವ್ಯವಸ್ಥೆ ಮಾಡಿ 37 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಒಟ್ಟು ಸೇರಿ ಮಾಡಿದ್ದೇವೆ. ಆದರೆ ಅಂದು ಯಾವೊಬ್ಬ ಕಾಂಗ್ರೆಸಿಗನು ಕೈ ಜೋಡಿಸಿರಲಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.

ಬಿಜೆಪಿಯಿಂದ ವಿಕಾಸ ಕಾಂಗ್ರೆಸ್‌ನಿಂದ ವಿನಾಶ
ಬಿಜೆಪಿಯಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ವಿಕಾಸವಾಗುತ್ತಿದ್ದಲ್ಲಿ ಕಾಂಗ್ರೆಸ್‌ನಿಂದ ವಿನಾಶವಾಗುತ್ತಿದೆ. ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎನ್ನುವ ಕಾಂಗ್ರೆಸ್ ಸಮಾಜದ ಶಾಂತಿ ಕೆಡಿಸುತ್ತದೆ. ಬಂಟ್ವಾಳದಲ್ಲಿ ಎರಡೂವರೆ ತಿಂಗಳು 144 ಸೆಕ್ಷನ್ ಜಾರಿಯಲ್ಲಿದ್ದದ್ದು ಕಾಂಗ್ರೆಸ್‌ನ ಆಡಳಿತಕ್ಕೆ ಕೈಗನ್ನಡಿಯಾಗಿತ್ತು. ಕಾಂಗ್ರೆಸ್‌ಗೆ ಹಾಕುವ ಒಂದೊಂದು ಮತವು ಅಭದ್ರತೆಗೆ ದಾರಿ ಮಾಡಿಕೊಡುವುದು, ಹಿಂದುಗಳನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವುದು ಎಂದು ತಿಳಿಸಿದರು.
ಸುನಿಲ್ ಕುಮಾರ್ ಗೆಲುವು ಅಭಿವೃದ್ಧಿಯ ಗೆಲುವು
ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿರುವುದರ ಋಣ ತೀರಿಸುವ ಪ್ರಯತ್ನವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರಾಮಾಣಿಕವಾಗಿ ಮಾಡಿದ್ದೇನೆ. ಅಪಪ್ರಚಾರ, ಸುಳ್ಳು ಸುದ್ದಿಗಳಿಗೆ ಕಿವಿಯಾಗದೆ ಮುಂದಿನ 20 ದಿನಗಳ ಕಾಲ ಬಿಜೆಪಿಯ ಗೆಲುವಿಗಾಗಿ ಶ್ರಮಿಸೋಣ. ಕಾರ್ಕಳದಲ್ಲಿ ಸುನಿಲ್ ಕುಮಾರ್ ಗೆಲುವು ಎಂದರೆ ಅದು ವೈಯಕ್ತಿಕ ಗೆಲುವಲ್ಲ, ಅದು ಅಭಿವೃದ್ಧಿಯ ಗೆಲುವು ಎಂದು ಹೇಳಿದ ಅವರು ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯ ಫಲಾನುಭವಿ. ಚುನಾವಣೆ ಮುಗಿದ ಬಳಿಕ ಅವರು ಕಾಂಗ್ರೆಸ್‌ನಲ್ಲಿ ಇರಲ್ಲ ಎಂದು ಭವಿಷ್ಯ ನೀಡಿದರು.

ಗೆಲುವಿನ ಅಂತರ 50 ಸಾವಿರ ದಾಟಬೇಕು – ಮಹೇಶ್ ಶೆಟ್ಟಿ
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತನಾಡಿ, ಕಾರ್ಕಳದಲ್ಲಿ ಬಿಜೆಪಿಯ ಗೆಲುವು ಖಚಿತ ಎಂಬುದಕ್ಕೆ ಕಾರ್ಕಳದಲ್ಲಾಗಿರುವ ಅಭಿವೃದ್ಧಿ ಕಾರ್ಯ ಮತ್ತು ನಾಮಪತ್ರ ಸಲ್ಲಿಕೆ ದಿನ ಸೇರಿರುವ ಜನತೆಯೆ ಸಾಕ್ಷಿ. ಈ ಬಾರಿ ಸುನಿಲ್ ಕುಮಾರ್ ಅವರ ಗೆಲುವಿನ ಅಂತರ 50 ಸಾವಿರ ದಾಟಬೇಕೆಂದು ಕರೆ ನೀಡಿದರು.

ಬಿಜೆಪಿಯ ಗೆಲುವು ಅನಿವಾರ್ಯ – ರಘುಪತಿ ಭಟ್
ಉಡುಪಿಯ ಶಾಸಕ ರಘುಪತಿ ಭಟ್ ಮಾತನಾಡಿ, ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಬಿಜೆಪಿಯ ಗೆಲುವು ಅವಶ್ಯ ಎನ್ನುವುದಕ್ಕಿಂತಲೂ ಅನಿವಾರ್ಯವಾಗಿದೆ. ಸುನಿಲ್ ಕುಮಾರ್ ಅವರ ಗೆಲುವು ರಾಜ್ಯದ ನಾಯಕತ್ವ ಪಡೆಯುವ ನಿಟ್ಟಿನಲ್ಲಿರಬೇಕು. ಆಡಳಿತ ಪಕ್ಷ ಮಾತ್ರವಲ್ಲದೆ ವಿರೋಧ ಪಕ್ಷದಲ್ಲಿ ನಾಯಕತ್ವ ಹೊಂದಿದ ಸಂದರ್ಭದಲ್ಲಿಯೂ ಸುನಿಲ್ ಕುಮಾರ್ ಕಾರ್ಕಳ ಅಭಿವೃದ್ಧಿಗೆ ಮಾಡಿದಂತಹ ಕೆಲಸ ಅಭಿನಂದನೀಯ ಎಂದರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮರ್ಥ ನಿರ್ವಹಣೆಯೊಂದಿಗೆ ವಿವಿಧ ಯೋಜನೆಗಳ ಮೂಲಕ ಸುನಿಲ್ ಕುಮಾರ್ ಜನಮಾನಸಕ್ಕೆ ಹತ್ತಿರವಾದರು. ಪ್ರತಿಯೊಬ್ಬ ಕಾರ್ಯಕರ್ತರು ನಾನೇ ಸುನಿಲ್ ಕುಮಾರ್ ನಾನೇ ಬಿಜೆಪಿ ಅಭ್ಯರ್ಥಿ ಎನ್ನುವಂತೆ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದರು.
ಹಿರಿತನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಕ್ಷೇತ್ರದ ಜನತೆಯದ್ದು – ಪ್ರಮೋದ್ ಮಧ್ವರಾಜ್
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಈಗಾಗಲೇ ಸುನಿಲ್ ಕುಮಾರ್ ಜಯ ಗಳಿಸಿದ್ದಾರೆ. ಗೆಲುವಿನ ಅಂತರವೆಷ್ಟು ಎನ್ನುವುದಷ್ಟೇ ಚುನಾವಣೆಯಲ್ಲಿ ತಿಳಿಯಲಿದೆ. ಕರಾವಳಿ ಭಾಗದಿಂದ 4 ನೇ ಬಾರಿಗೆ ವಿಧಾನಸೌಧ ಪ್ರವೇಶಿಸಲಿರುವ ಸುನಿಲ್ ಕುಮಾರ್ ಹಿರಿಯ ನಾಯಕರಾಗಿ ಗುರುತಿಸಿಕೊಳ್ಳಲಿದ್ದಾರೆ. ಈ ಹಿರಿತನ ಕಾಯ್ದುಕೊಳ್ಳುವ ಜವಾಬ್ದಾರಿ ಕ್ಷೇತ್ರದ ಜನತೆಯದ್ದಾಗಿದೆ. ಸ್ವರ್ಣ ಕಾರ್ಕಳವಾಗಿರುವ ಕ್ಷೇತ್ರವನ್ನು ವಜ್ರ ಕಾರ್ಕಳವನ್ನಾಗಿ ಸುನಿಲ್ ಕುಮಾರ್ ಪರಿವರ್ತಿಸಲಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಾರ್ಕಳ ಉತ್ಸವನ್ನು ಮರುಕಳಿಸಿದ ಮೆರವಣಿಗೆ
ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆಯ ಮುನ್ನ ಸ್ವರಜ್ ಮೈದಾನದಿಂದ ಕುಕ್ಕುಂದೂರು ಮೈದಾನದವರೆಗೆ ಮೆರವಣಿಗೆ ಸಾಗಿತು. ಬಿರು ಬಿಸಿಲನ್ನು ಲೆಕ್ಕಿಸದೆ ಸುನಿಲ್ ಕುಮಾರ್ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಕೊಂಬು, ಚೆಂಡೆನಾದ ಮೆರವಣಿಗೆಗೆ ಮೆರುಗು ನೀಡಿತು. ಬಿಜೆಪಿ ಪತಾಕೆಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿತ್ತು. ಹತ್ತೂವರೆಗೆ ಪ್ರಾರಂಭಗೊಂಡ ಹನ್ನೆರಡು ಗಂಟೆ ವೇಳೆಗೆ ಕುಕ್ಕುಂದೂರು ಮೈದಾನ ತಲುಪಿತು. 3 ಕಿ.ಮೀ. ದೂರ ಬಿಸಿಲ ಧಗೆಯನ್ನು ಲೆಕ್ಕಿಸದೆ ಅತ್ಯಂತ ಉತ್ಸಾಹದಿಂದ ಕಾರ್ಯಕರ್ತರು ಪಾಲ್ಗೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲದ ಚಿತ್ರವನ್ನು ಮೈಯಲ್ಲಿ ಚಿತ್ರಿಸಿಕೊಂಡಿದ್ದ ಯುವಕರು ವಿಶೇಷವಾಗಿ ಎಲ್ಲರ ಗಮನ ಸೆಳೆದರು. ಒಟ್ಟು ಮೆರವಣಿಗೆ ಕಾರ್ಕಳ ಉತ್ಸವ ಮರುಕಳಿಸುವಂತ ಅನುಭವ ನೀಡಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ಶೆಟ್ಟಿ, ಕಾರ್ಕಳ ಕೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಎಂ. ಕೆ. ವಿಜಯಕುಮಾರ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕರ್ನಾಟಕ ಕ್ವಾರಿ ಅಸೋಸಿಯೇಶನ್‌ನ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್‌ಪಾಲ್ ಸುವರ್ಣ, ಕಾಪು ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ನವೀನ್ ಶೆಟ್ಟಿ, ಉದ್ಯಮಿಗಳಾದ ವಿಶ್ವನಾಥ ಕಡ್ತಲ, ಹರೀಶ್ ಶೆಟ್ಟಿ ಎರ್ಮಾಳ್, ಪ್ರಸಾದ್ ಶೆಟ್ಟಿ, ಪುರಂದರ, ಬಾಲಕೃಷ್ಣ ಶೆಟ್ಟಿ, ಬೆಳುವಾಯಿ ಸದಾನಂದ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ಕರುಣಾಕರ ಶೆಟ್ಟಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜ್ಯೋತಿ ರಮೇಶ್ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್ ಸ್ವಾಗತಿಸಿ, ಬಿಜೆಪಿ ಚುನಾವಣ ವಕ್ತಾರ ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಮಿಯ್ಯಾರು ಶಕ್ತಿಕೇಂದ್ರದ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ವಂದಿಸಿದರು.


























