ಅಂತರಂಗದ ಸಂಗತಿ ಅಂತರ್ಮುಖಿಯಾದಾಗ ಕಾವ್ಯ ಹುಟ್ಟಿಕೊಳ್ಳುವುದು- ಯೋಗೀಶ್ ಕೈರೋಡಿ
ಕಾರ್ಕಳ : ಹೊರ ಜಗತ್ತನ್ನು ನೋಡುತ್ತಾ, ಅನುಭವಿಸುತ್ತಾ ಯಾರೂ ಕಾಣದೇ ಇರುವುದನ್ನು ಕವಿ ಕಾಣಬಲ್ಲ. ಅಂತರಂಗದಲ್ಲಿ ಕಾಣುವ ಸಂಗತಿಗಳೆಲ್ಲವನ್ನೂ ಅಂತರ್ಮುಖಿಯಾಗಿಸಿಕೊಂಡಾಗ ಉತ್ತಮ ಕಾವ್ಯ ಹುಟ್ಟಿಕೊಳ್ಳುವುದು ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಅಭಿಪ್ರಾಯಪಟ್ಟರು.
ಅವರು ಏ. 16 ರಂದು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇದರ ಜಂಟಿ ಸಹಯೋಗದೊಂದಿಗೆ ಹೋಟೆಲ್ ಪ್ರಕಾಶ್‌ನ ಸಭಾಂಗಣದಲ್ಲಿ ನಡೆದ ತಿಂಗಳ ಅರಿವು ತಿಳಿವು ಉಪನ್ಯಾಸ ಕಾರ್ಯಕ್ರಮದಲ್ಲಿ ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ್ಯ ವಿಷಯದ ಕುರಿತು ಉಪನ್ಯಾಸ ನೀಡಿದರು.

ದಾರ್ಶನಿಕರು ಕಾವ್ಯದ ಬಗ್ಗೆ ಕಾವ್ಯ ಮೀಮಾಂಸೆಯಂತಹ ಹಲವು ಮಾರ್ಗದರ್ಶಿ ಕೃತಿಗಳನ್ನು ನೀಡಿರುತ್ತಾರೆ. ಅದರ ಅಧ್ಯಯನವಿಲ್ಲದೆ ಕಾವ್ಯವನ್ನು ಲಘುವಾಗಿ ಪರಿಗಣಿಸಿ ರಚಿಸಿದ ಕವನಗಳೆಲ್ಲವೂ ಅವಸರದ ಉತ್ಪನ್ನಗಳಾಗಿದೆ. ಪಾಶ್ಚಿಮಾತ್ಯ ವಿದ್ವಾಂಸರು ಕೂಡಾ ಕಾವ್ಯದ ಬಗ್ಗೆ ಗಂಭೀರವಾಗಿ ಚರ್ಚೆ, ವಾದ, ಪ್ರತಿಪಾದನೆಗಳನ್ನು ಮಾಡಿರುವುದನ್ನು ಗಮಿಸಿದರೆ ಕಾವ್ಯಕ್ಕೆ ಅವರು ಕೂಡಾ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎನ್ನುವುದನ್ನ ಮನಗಾಣಬಹುದಾಗಿದೆ ಎಂದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ, ಅ.ಭಾ.ಸಾ.ಪ.ದ ಕಾರ್ಕಳ ತಾಲೂಕು ಗೌರವಾಧ್ಯಕ್ಷ ನಿತ್ಯಾನಂದ ಪೈ, ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಶ್ರೀ ಆದಿರಾಜ್ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಮಿತ್ರಾಪ್ರಭಾ ಹೆಗ್ಡೆ ವಂದಿಸಿದರು.
























