ಟಿಕೆಟ್‌ ಹಂಚಿಕೆ ವಿಚಾರ – ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ : ಸುನಿಲ್‌ ಕುಮಾರ್‌

ಕಾರ್ಕಳ : ಪಾರದರ್ಶಕ ಮತ್ತು ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯೇ ಉತ್ತಮ ನಿದರ್ಶನ. ತನ್ಮೂಲಕ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ಸಿಕ್ಕಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಅವರು ಎ. 13ರಂದು ವಿಕಾಸ ಕಚೇರಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಬಿಜೆಪಿಯ ಪ್ರಯೋಗದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಚುನಾವಣಾ ನಿರ್ವಹಣಾ ಸಮಿತಿ ಅದನ್ನು ಕೇಂದ್ರದ ಪಾರ್ಲಿಮೆಂಟ್‌ ಬೋರ್ಡ್‌ ಗೆ ಕಳುಹಿಸಿದೆ. ಅಭ್ಯರ್ಥಿಗಳ ಪಟ್ಟಿ ಅಲ್ಲಿ ಸಿದ್ಧಪಡಿಸಲಾಗಿದೆ. ಇಷ್ಟು ಪಾರದರ್ಶಕವಾಗಿ ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ಯಾವ ರಾಜಕೀಯ ಪಾರ್ಟಿಯೂ ಅಭ್ಯರ್ಥಿ ಆಯ್ಕೆ ಮಾಡಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಪ್ರಯೋಗವಾಗಿದೆ. ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ದೊರೆತಿದೆ ಎಂದರು.

ಇದೇ ಮೊದಲಲ್ಲ
ಹೊಸಮುಖಗಳಿಗೆ ಬಿಜೆಪಿಯಲ್ಲಿ ಟಿಕೆಟ್‌ ನೀಡುವುದು ಇದೇ ಮೊದಲಲ್ಲ. 2004ರ ಚುನಾವಣೆಯಲ್ಲೂ ನನಗೆ, ರಘುಪತಿ ಭಟ್‌, ಸಿಟಿ ರವಿ ಸೇರಿದಂತೆ ಅನೇಕರಿಗೆ ಅಂದು ಟಿಕೆಟ್‌ ನೀಡಲಾಗಿತ್ತು. ಕಳೆದ ಅವಧಿಯಲ್ಲಿ ಕರಾವಳಿ ಭಾಗದ ಹರೀಶ್‌ ಪೂಂಜ, ಭರತ್‌ ಶೆಟ್ಟಿ, ವೇದವ್ಯಾಸ್‌ ಹೀಗೆ ಹೊಸಬರಿಗೆ ಬಿಜೆಪಿ ಅವಕಾಶ ನೀಡಿತ್ತು. ಈ ಪ್ರಯೋಗ ಯಶಸ್ವಿಯಾಗಿದೆ. ಬಿಜೆಪಿಯು ವ್ಯಕ್ತಿಗಿಂತ ಸಿದ್ಧಾಂತಕ್ಕೆ ಮಹತ್ವ ನೀಡುತ್ತದೆ. ಬಿಜೆಪಿ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಕಾರ್ಯಕರ್ತರ ಅಭಿಪ್ರಾಯಗಳಿಗೆ ಅನುಗುಣವಾಗಿ ಹೊಸ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತದೆ ಎಂದರು.

ಪಕ್ಷಕ್ಕೆ ವಿರುದ್ಧವಾಗಿ ಹೋಗಬಾರದು
ಪಕ್ಷಕ್ಕೆ ವಿರುದ್ದವಾಗಿ ಯಾವ ಕಾರ್ಯಕರ್ತರೂ ಹೋಗಬಾರದು. ಅವಕಾಶ ಎಲ್ಲರಿಗೂ ಸಿಗಲಿದೆ. ಒಂದು ವೇಳೆ ಅವಕಾಶ ದೊರೆತಿಲ್ಲ ಎಂದಾದರೆ ಬೇರೆ ಪಕ್ಷಕ್ಕೆ ಹೋಗುತ್ತೇನೆ, ಭಿನ್ನಮತ ಮಾಡ್ತೇನೆ ಎನ್ನುವುದು ಸರಿಯಲ್ಲ. ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ಸಾಧ್ಯವಾಗುವುದು. ಕಾರ್ಯಕರ್ತರ ಪರಿಶ್ರಮ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ
ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾರ್ಕಳದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಲಾಗಿದೆ. ಈ ಕುರಿತು ನನಗೆ ತೃಪ್ತಿಯಿದೆ. ಈ ಕಾರ್ಯವನ್ನು ಮುಂದುವರಿಸುವುದಕ್ಕೋಸ್ಕರ ಡಬಲ್‌ ಇಂಜಿನ್‌ ಸರಕಾರದ ಅಗತ್ಯವಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಕಾರ್ಕಳದಲ್ಲಿಯೂ ಬಿಜೆಪಿ ಜನಪ್ರತಿನಿಧಿ ಇದ್ದಾಗ ಮಾತ್ರ ಒಂದೊಂದು ಕೊಂಡಿಯಂತೆ ಕೆಲಸ ಮಾಡಲು ಅನುಕೂಲವಾಗುವುದು. ಆ ಹಿನ್ನೆಲೆಯಲ್ಲಿ ಕಾರ್ಕಳದ ಜನ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸುನೀಲ್‌ ಕುಮಾರ್‌ ವಿನಂತಿ ಮಾಡಿಕೊಂಡರು.

ಕೃತಜ್ಞತೆ ಸಲ್ಲಿಕೆ
ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಎ. 19ರಂದು ನಾಮಪತ್ರ ಸಲ್ಲಿಕೆ
ಪಕ್ಷದ ಕಾರ್ಯಕರ್ತರ, ಹಿರಿಯರ ಹೀಗೆ ಸರ್ವರ ಸಹಕಾರದೊಂದಿಗೆ ಎ. 19 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಬೆಳಿಗ್ಗೆ ಸ್ವರಾಜ್‌ ಮೈದಾನದಿಂದ ಕಾರ್ಕಳದ ಪ್ರಮುಖ ರಸ್ತೆಯ ಮೂಲಕ ಕುಕ್ಕುಂದೂರು ಮೈದಾನವರೆಗೆ ಮೆರವಣಿಗೆ ಸಾಗಿ ಅನಂತರ ನಾಮಪತ್ರ ಸಲ್ಲಿಸಲಿದ್ದೇನೆ. ಕ್ಷೇತ್ರದ ಎಲ್ಲ ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ನನ್ನೊಂದಿಗೆ ಹೆಜ್ಜೆ ಹಾಕಬೇಕೆಂದು ವಿನಂತಿಸುತ್ತಿದ್ದೇನೆ. ಇವತ್ತಿನಿಂದ ನಮ್ಮ ಚುನಾವಣಾ ಕಾರ್ಯಾಲಯ ಪ್ರಾರಂಭವಾಗಿದೆ. ಮುಂದಿನ 20 ದಿನಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ಮಾಡಿ ಕಾರ್ಕಳದಲ್ಲಿ ಆದ ಅಭಿವೃದ್ದಿ ಕಾರ್ಯಗಳ ಕುರಿತು ಹೇಳಲಿದ್ದೇವೆ. ಭವಿಷ್ಯದ ಕಾರ್ಕಳದಲ್ಲಿ ಏನಾಗಬೇಕೆಂಬ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ನೇರ ಸ್ಪರ್ಧೆ
ಕಾರ್ಕಳದಲ್ಲಿ 2004 ರಿಂದಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ, ಮತದಾರರು ಅಭಿವೃದ್ಧಿ ಪರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ. 2018 ರ ಮೇ ತಿಂಗಳಿನಿಂದ 2023 ರ ಮೇ ತಿಂಗಳಿನವರೆಗೆ ಜನರ ಸುಖ ಕಷ್ಟಗಳಲ್ಲಿ ಜೊತೆಯಾದವನು ಸುನಿಲ್‌ ಕುಮಾರ್ ಮತ್ತು ಬಿಜೆಪಿ ಕಾರ್ಯಕರ್ತರು. ಆದರೆ, ಈಗ ಚುನಾವಣೆಯ ಸಂದರ್ಭ ಯಾರೋ ಬಂದು ಮಾತನಾಡಿದರೆ ಅದಕ್ಕೆ ಮಹತ್ವ ನೀಡಬೇಕಾಗಿಲ್ಲ. ಈವರೆಗೆ ಜನಸೇವೆ ಯಾರು ಮಾಡುತ್ತಾರೋ ಅವರಿಗೆ ಜನರು ಮನ್ನಣೆ ದೊರೆಯಲಿದೆಯೇ ಹೊರತು ಚುನಾವಣೆಯ ಸಂದರ್ಭ ಅಪಪ್ರಚಾರ ಮಾಡುವವರಿಗೆ ಅಲ್ಲ ಎಂಬ ವಿಶ್ವಾಸವಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

















































error: Content is protected !!
Scroll to Top