ಕಾರ್ಕಳ : ವಿಕಾಸ ಜನಸೇವಾ ಕಚೇರಿಯ ಮೊದಲ ಮಹಡಿಯಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಕಚೇರಿ ಎ. 13ರಂದು ಉದ್ಘಾಟನೆಗೊಂಡಿತು. ಬಿಜೆಪಿಯ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್ ಕಚೇರಿ ಉದ್ಘಾಟಿಸಿ, ಶುಭಹಾರೈಸಿದರು.
ಮತ್ತೊರ್ವ ಬಿಜೆಪಿ ಮುಖಂಡ ಎಂ.ಕೆ. ವಿಜಯ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಎಲ್ಲೂ ಇಲ್ಲದಂತಹ ಅಭಿವೃದ್ಧಿ ಪರ ವಾತಾವರಣ ಕಾರ್ಕಳದಲ್ಲಿದೆ. ಈ ಬಾರಿ ಸುನಿಲ್ ಕುಮಾರ್ ಅವರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡಬೇಕು. ಕಾರ್ಕಳದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಮಾದರಿ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸುನಿಲ್ ಕುಮಾರ್ 84 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಬೇಕಿದೆ. ಮುತಾಲಿಕ್ ಹೆಸರು ಹೇಳುವುದೇ ಬೇಡ ಅನಿಸುತ್ತೆ. ಅದಕ್ಕೂ ಅವರು ಯೋಗ್ಯರಲ್ಲ ಎಂದು ಎಂ.ಕೆ. ವಿಜಯ ಕುಮಾರ್ ಕುಟುಕಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಎಂ. ರಾಮಚಂದ್ರ ನಾಯಕ್, ವಿಜಯೇಂದ್ರ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಕುಮಾರ್ ವಂದಿಸಿದರು.

























