ಬೆಂಗಳೂರು : ಮಹಿಳೆಯೊಂದಿಗಿರುವ ಖಾಸಗಿ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಸಂಜೀವ ಮಠಂದೂರು ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನನ್ನು ಮೂಲೆಗುಂಪು ಮಾಡುವ ಪಿತೂರಿಯ ಭಾಗವಾಗಿ ಫೋಟೊಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ಮಠಂದೂರು ಹೇಳಿದ್ದಾರೆ. ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೋಟೊಗಳನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವೀಡಿಯೋ ಹೇಳಿಕೆ ನೀಡಿದ ಸಂತ್ರಸ್ತ ಮಹಿಳೆ
ಸಂತ್ರಸ್ತ ಮಹಿಳೆ ಕೂಡ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ತನ್ನ ಖಾಸಗಿ ಫೊಟೋವನ್ನು ಎಡಿಟ್ ಮಾಡಿ, ಜನಪ್ರತಿನಿಧಿಯೊಂದಿಗೆ ಜೋಡಿಸಲಾಗಿದೆ. ಈ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ದೌರ್ಜನ್ಯ ನಡೆಸಲಾಗುತ್ತಿದೆ. ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಇಂತಹ ಘಟನೆಯಿಂದಾಗಿ ತನಗೆ ಹಾಗೂ ತನ್ನ ಮನೆಮಂದಿಗೆ ತೀವ್ರ ನೋವಾಗಿದೆ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ. ಫೊಟೋವನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಫೊಟೋದಲ್ಲಿರುವ ಜನಪ್ರತಿನಿಧಿಗೂ ತನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತಾಗಿ ಮಹಿಳೆ ವೀಡಿಯೋ ಹೇಳಿಕೆಯನ್ನು ಹೊರಬಿಟ್ಟಿದ್ದಾರೆ.




















