ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

ಕಾರ್ಕಳ : ಧಾರ್ಮಿಕ ಪ್ರಜ್ಞೆಯಿದ್ದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಹಿಂದೂ ಧರ್ಮದ ಉದಾತ್ತ ಚಿಂತನೆ ಕುರಿತು ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳು ಮುಂದುವರಿಯಬೇಕು ಎಂದು ಸಂಪುಟ ನರಸಿಂಹ ಮಠ ಸುಬ್ರಮಣ್ಯದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಆಶೀರ್ವಚನ ನೀಡಿದರು.

ಅವರು ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 13 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶುಭ ಸಂಸನೆಗೈದರು. ಎದುರಾಗುವ ಅನಿಷ್ಟ, ಸಾಂಕ್ರಾಮಿಕ ರೋಗಗಳನ್ನು ಹೋಗಾಲಾಡಿಸುವಲ್ಲಿ ಮಾರಿಯಮ್ಮನ ಆರಾಧನೆ ಹಿರಿಯರ ಬಹುದೊಡ್ಡ ನಂಬಿಕೆಯಾಗಿತ್ತು. ಇಂದು ಪೂರ್ವಜರ ನಂಬಿಕೆಯೊಂದಿಗೆ ಕಾರ್ಕಳದಲ್ಲಿ ಶ್ರೀ ಮಾರಿಯಮ್ಮ ದೇವಿಯ ಭವ್ಯವಾದ ದೇಗುಲ ನಿರ್ಮಾಣವಾಗಿದೆ. ಭಕ್ತಿ ಕೇಂದ್ರದ ಅಭಿವೃದ್ಧಿಯಲ್ಲಿ ಕ್ಷೇತ್ರದ ಸಚಿವರ ಪಾಲ್ಗೊಳ್ಳುವಿಕೆ ಹಾಗೂ ದಾನಿಗಳ ಉದಾತ್ತ ಕೊಡುಗೆ ಮತ್ತು ಭಕ್ತರ ಭಕ್ತಿಯ ಸಂಕೇತವಾಗಿ ಅಭೂತಪೂರ್ವ ದೇವಾಲಯ ನಿರ್ಮಾಣವಾಗಿರುವುದು ಸಂತಸ ಎಂದರು.

ಧಾರ್ಮಿಕತೆಯೊಂದಿಗೆ ಭವಿಷ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ದೇಗುಲದ ವೈಭವತೆ – ವಿ. ಸುನೀಲ್‌ ಕುಮಾರ್
ಜಾನುವಾರು, ಎಳೆ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರಿಗೆ ಯಾರಿಗೆ ಏನೇ ಕಷ್ಟ ಬಂದರೂ ಪರಿಹಾರವಾಗಿ ಮೊದಲು ಕಣ್ಣಿಗೆ ಕಾಣುವವರೇ ಮಾರಿಯಮ್ಮ. ತಾಲೂಕಿನ ಸಮಸ್ತ ಜೀವರಾಶಿಯ ಸಂಕಷ್ಟ ಪರಿಹಾರ ಮಾಡುವ ಶಕ್ತಿಯೇ ಕಾರ್ಕಳದ ಮಾರಿಯಮ್ಮ. ದೇವಿಯ ಆರಾಧನಾ ಕೇಂದ್ರ ಜೀರ್ಣೋದ್ಧಾರವಾಗಬೇಕೆಂಬ ತಾಲೂಕಿನ ಸಮಸ್ತ ಜನತೆಯ ಕನಸು 19 ಕೋ. ರೂ. ಯೋಜನೆಯೊಂದಿಗೆ ಕನಿಷ್ಟ 9 ತಿಂಗಳಲ್ಲಿ ಪರಿಪೂರ್ಣವಾಗಿರುವುದು ದೇವಿಯ ಕಾರಣೀಕತೆಗೆ ಸಾಕ್ಷಿಯಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿವ ವಿ. ಸುನೀಲ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ದೇವಸ್ಥಾನದ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ವಿವಿಧ ಸಮಿತಿ, ಗುತ್ತಿಗೆದಾರರು, ದಾನಿಗಳ ಕೊಡುಗೆ,ಅರ್ಚಕ ವೃಂದ, ಶಿಲ್ಪಿಗಳು, ಸ್ವಯಂ ಸೇವಕರು ಹಾಗೂ ಭಕ್ತರ ಸಹಕಾರ ಸ್ತುತ್ಯಾರ್ಹ. ತರಕಾರಿ, ಹಣ್ಣು ಹಂಪಲುಗಳ ಮೂಲಕ ದೇವಾಲಯದ ಅಲಂಕಾರ ಮಾಡಿರುವುದು ತಾಲೂಕು ಮಾತ್ರವಲ್ಲದೆ ಹೊರ ಜಿಲ್ಲೆಯ ಜನತೆಯ ಗಮನ ಸೆಳೆದಿರುವುದು ಸಂತಸ ತಂದಿದೆ. ಭಕ್ತರ ಆಶಯದಂತೆ ತಿಂಗಳಿಗೊಮ್ಮೆ ಚಂಡಿಕಾಯಾಗ, ಪ್ರತಿ ಮಂಗಳವಾರ ಅನ್ನಸಂತರ್ಪಣೆ ನಡೆಸುವ ಯೋಜನೆಯೊಂದಿಗೆ ದೇವಾಲಯದಲ್ಲಿ ನಿರಂತರವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುವಲ್ಲಿ ದೇಗುಲದ ಆಡಳಿತ ಮಂಡಳಿ ಗಮನವಹಿಸಬೇಕು ಎಂದರು.

ದೇಗುಲದ ನಿರ್ಮಾಣಕ್ಕಾಗಿ ಬಳಸಿರುವ ಮರಗಳ ಪ್ರತಿಯಾಗಿ 5 ಎಕರೆ ಜಾಗದಲ್ಲಿ 500 ಗಿಡಗಳನ್ನು ನೆಟ್ಟು ಮುಂದಿನ 5 ವರ್ಷ ಪೋಷಣೆಯ ಜವಾಬ್ದಾರಿಯನ್ನು ಹೊತ್ತಿದ್ದೇವೆ. ತನ್ಮೂಲಕ ಬ್ರಹ್ಮಕಲಶೋತ್ಸವದಲ್ಲಿ ಮಾದರಿ ಸಂದೇಶವನ್ನು ನಾಡಿಗೆ ನೀಡುತ್ತಿದ್ದೇವೆ. ಭೋಜನ, ಪಾರ್ಕಿಂಗ್‌, ಸ್ವಚ್ಛತೆ, ಅಲಂಕಾರ ಹೀಗೆ ಎಲ್ಲಾ ವಿಚಾರದಲ್ಲಿನ ಅಚ್ಚುಕಟ್ಟುತನ ಮಾದರಿಯಾಗಿದೆ. ಕಾರ್ಕಳ ಮಾರಿಯಮ್ಮ ದೇವಸ್ಥಾನಕ್ಕೆ ಬೇರೆ ಬೇರೆ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಗಿ ಬರುವ ಮೂಲಕ ಧಾರ್ಮಿಕತೆಯೊಂದಿಗೆ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಮುಂದಿನ ದಿನಗಳಲ್ಲಿ ದೇಗುಲ ಇನ್ನಷ್ಟು ವೈಭವತೆ ಪಡೆಯಲಿದೆ ಎಂದರು.

ಸನ್ಮಾನ
ವಾಸ್ತುಶಾಸ್ತ್ರಜ್ಞ ಕೃಷ್ಣರಾಜ್‌ ತಂತ್ರಿ, ದೈವಜ್ಞ ಶಶಿಪಂಡಿತ್‌, ಶಿಲ್ಪಶಾಸ್ತ್ರಜ್ಞ ಎಳ್ಳೂರು ವಿಷ್ಣುಮೂರ್ತಿ ಭಟ್‌, ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ, ಮರದ ಕೆತ್ತನೆಕಾರ ಪ್ರಶಾಂತ್‌ ಆಚಾರ್ಯ, ತಾಮ್ರದ ಹೊದಿಕೆ ನಿರ್ಮಾಣಕಾರ ಯೋಗರಾಜ್‌ ಹಾಗೂ ಎಸ್‌ಕೆಎಸ್‌ನ ರೈಟರ್‌ ಸುರೇಶ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳಾದ ಪಾಲಡ್ಕ ನರಸಿಂಹ ಪೈ, ರಘುನಂದನ್‌ ಜೈನ್‌, ಗೌತಮ್‌ ಕಾಂತಾವರ, ರಾವಂತ್‌ ವರ್ಲ್ಡ್‌ ಜರ್ನಿ ಆಫ್‌ ಸಕ್ಸಸ್‌ ಬೆಂಗಳೂರು ಇದರ ಸದಸ್ಯ, ರತ್ನಾ ಸದಾಶಿವ ಶೆಟ್ಟಿ, ದಿನೇಶ್‌ ಶೆಟ್ಟಿ, ಡಿ. ಆರ್‌. ರಾಜು, ನವೀನ್‌ ಎಮ್.‌ ಪೈ, ವಿ.ಕೆ ಗ್ರೂಪ್ಸ್ ನ ಜೆ. ಎಂ. ಶೆಟ್ಟಿ, ಮಾರಿಯಮ್ಮ ದೇವಾ ಸೇವಾ ಸಮಿತಿ, ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಸುಧಾಕರ ಶೆಟ್ಟಿ, ಕೃಷ್ಣಮೂರ್ತಿ ಮಂಜ, ಗುರುದತ್ತ್‌ ಶಾನುಭೋಗ್‌ ಅವರನ್ನು ಗೌರವಿಸಲಾಯಿತು.

ಕಾರ್ಕಳ ಅಂದ್ರೆ ಸುನೀಲ್‌ ಕುಮಾರ್‌
ಉದ್ಯಮಿ ಕೃಷ್ಣಮೂರ್ತಿ ಮಂಜ ಮಾತನಾಡಿ, ಕಾರ್ಕಳದ ಹೆಸರಿನೊಂದಿಗೆ ಸುನೀಲ್‌ ಕುಮಾರ್‌ ಅವರ ಹೆಸರು ಎಂದಿಗೂ ಸ್ಮರಣೀಯ. ಕಾರ್ಕಳದ ಅಭಿವೃದ್ಧಿಯಲ್ಲಿ ಅವರ ಅವಿರತ ಪರಿಶ್ರಮ ಶ್ಲಾಘನೀಯ, ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ ನಿರ್ಮಾಣದ ಮೂಲಕ ಕಾರ್ಕಳದ ಜನಮಾನಸದಲ್ಲಿ ಭಕ್ತಿಯ ಸುಧೆಯನ್ನೆ ಹರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ದೇವಸ್ಥಾನದ ಆಡಳಿತ ಮೋಕ್ತೆಸರಾದ ಕೆ. ಬಿ. ಗೋಪಾಲಕೃಷ್ಣ ರಾವ್‌, ಸುರೇಶ್‌ ಹವಾಲ್ದಾರ್‌, ರಾಘವೇಂದ್ರ ಕಾರ್ಕಳ, ಪ್ರಧಾನ ಅರ್ಚಕ ವೇದಮೂರ್ತಿ ಜಾರ್ಕಳ ಪ್ರಸಾದ್‌ ತಂತ್ರಿ, ಸುಜಯ್‌ ಕುಮಾರ್‌ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಪುರುಷೋತ್ತಮ್‌ ಕಲ್ಕೂರ, ಹರೀಶ್‌ ರಾಣೆ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯ್‌ ಶೆಟ್ಟಿ, ವೇದಮೂರ್ತಿ ರಘುರಾಮ್‌ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಗಣೇಶ್‌ ಕಾಮತ್‌, ಜಗದೀಶ್‌ ಮಲ್ಯ, ನವೀನ್‌ ದೇವಾಡಿಗ, ಭಾಸ್ಕರ್‌ ಕುಲಾಲ್‌, ಹರೀಶ್‌ ಅಮಿನ್‌ ಮೊದಲಾದವರು ಉಪಸ್ಥಿತರಿದ್ದರು. ಆರತಿ ಪೈ ಪ್ರಾರ್ಥಿಸಿದರು. ನವೀನ್‌ ನಾಯಕ್‌ ಸ್ವಾಗತಿಸಿದರು. ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮ ನಿರೂಪಿಸಿ, ನವೀನ್‌ ದೇವಾಡಿಗ ವಂದಿಸಿದರು.





























































































error: Content is protected !!
Scroll to Top