ಹೆಬ್ರಿಯಲ್ಲಿ ಬಿಜೆಪಿ ಬೃಹತ್‌ ವಿಜಯ ಸಂಕಲ್ಪ ಯಾತ್ರೆ

ಹೆಬ್ರಿ : ಸ್ವಾಮಿ ವಿವೇಕಾನಂದರು ಅಂದು ನೂರು ಬಿಸಿರಕ್ತದ ಯುವಕರನ್ನು ಕೊಡಿ. ದೇಶದ ಚಿತ್ರಣವನ್ನೇ ಬದಲಿಸುತ್ತೇನೆ ಎಂದಿದ್ದರು. ಅಂತಹ ನೂರು ಯುವಕರಲ್ಲಿ ಒಬ್ಬ ಸುನೀಲ್‌ ಕುಮಾರ್‌ ಎಂದರೆ ತಪ್ಪಾಗಲಾರದು ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಹೇಳಿದರು.
ಅವರು ಮಾ. 13ರಂದು ಹೆಬ್ರಿ ದಿ. ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಪ್ರತಿ ಗ್ರಾಮದ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದ ಸುನೀಲ್‌ ಕುಮಾರ್‌ ಕಾರ್ಕಳವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. 224 ಕ್ಷೇತ್ರಗಳಲ್ಲಿ ಕಾರ್ಕಳವೇ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ ಎಂದು ಈಶ್ವರಪ್ಪ ಹೇಳಿದರು.
ನವ ಭಾರತ ನಿರ್ಮಾಣದ ಪಣತೊಟ್ಟು ಪ್ರಧಾನಿ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಿರಂಗಾ ಯಾತ್ರೆ, ಭವ್ಯ ರಾಮಮಂದಿರ ನಿರ್ಮಾಣ, ಆರ್ಟಿಕಲ್‌ 370, ತ್ರಿವಳಿ ತಲಾಕ್‌ ರದ್ದು ಮೊದಲಾದ ಕಾರ್ಯ ನರೇಂದ್ರ ಮೋದಿಯಿಂದಾಗಿದೆ ಎಂದು ಈಶ್ವರಪ್ಪ ಹೇಳಿದರು.

ಪ್ರತಿ ಕುಟುಂಬಕ್ಕೂ ಒಂದಲ್ಲ ಒಂದು ಯೋಜನೆ

ಸಚಿವ ಸುನೀಲ್‌ ಕುಮಾರ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಪ್ರತಿ ಕುಟುಂಬಕ್ಕೂ ದೊರೆಯಬೇಕೆನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಕಳದ ಪ್ರತಿ ಹಳ್ಳಿ ಹಳ್ಳಿಯ ರಸ್ತೆಗಳು ಬದಲಾಗಿದ್ದು 10 ವರ್ಷದ ಹಿಂದೆ ಇದ್ದ ಕಾರ್ಕಳ ಇಂದು ಅಭಿವೃದ್ಧಿ ಪಥದತ್ತ ಸಾಗಿದೆ. ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಕಾರ್ಕಳ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತಂದಿದ್ಧೇನೆ. ಕಾರ್ಕಳ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಪರಶುರಾಮ ಥೀಂ ಪಾರ್ಕ್‌, ಕೋಟಿ ಚೆನ್ನಯ್ಯ ಥೀಂ ಪಾರ್ಕ್‌, ಯಕ್ಷರಂಗಾಯಣ, ಕಾರ್ಕಳ ಉತ್ಸವ ಮಾಡಲಾಗಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಕಳ ವಿಧಾನ ಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಬಾಹುಬಲಿ ಪ್ರಸಾದ್‌, ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌ ಕುಮಾರ್‌, ರಾಜ್ಯ ವಿಜಯ ಸಂಕಲ್ಪ ಯಾತ್ರೆಯ ಸಹಸಂಚಾಲಕ ಕಿಶೋರ್‌ ಕುಮಾರ್‌, ದತ್ತಾತ್ರೇಯ, ಯುವಮೋರ್ಚಾ ಜಿಲ್ಲಾ‍ಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಹಿರಿಯ ಮುಖಂಡರಾದ ಸತೀಶ್‌ ಪೈ, ಮುನಿಯಾಲು ದಿನೇಶ್‌ ಪೈ, ಗುರುದಾಸ್‌ ಶೆಣೈ, ಮೋಹನ್‌ ದಾಸ್‌ ನಾಯಕ, ಜಿಲ್ಲಾ ಮ.ಮೋ.ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್‌, ಜಿ. ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್‌, ಕಾರ್ಕಳ ತಾಲೂಕು ಮ.ಮೋ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನಯಾ ಬಂಗೇರ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಪ್ರಾಸ್ತವಿಕ ಮಾತುಗಳನ್ನಾಡಿದರು. ಪ್ರಸನ್ನ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಬೇಬಿ ಅಂಡಾರು ಪ್ರಾರ್ಥಿಸಿದರು. ರಾಘವೇಂದ್ರ ಡಿ. ಜಿ. ನಿರೂಪಿಸಿ, ನಾಗೇಂದ್ರ ವಂದಿಸಿದರು.













































































error: Content is protected !!
Scroll to Top