ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಿಂದ ಭಾರೀ ಪ್ರತಿಭಟನೆ : ಸಿಎಂ ರಾಜಿನಾಮೆಗಾಗಿ ಆಗ್ರಹ

ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಗುತ್ತಿಗೆದಾರರಿಂದ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನಂತರ ಅವರ ಕಚೇರಿ ನಿವಾಸದಲ್ಲಿ ತೀವ್ರ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಲೆಕ್ಕಕ್ಕೆ ಸಿಗದ 8 ಕೋಟಿ ರೂಪಾಯಿಗೂ ಅಧಿಕ ನಗದು ಸಿಕ್ಕಿದ್ದಲ್ಲದೆ ಅಪಾರ ಪ್ರಮಾಣದ ಚಿನ್ನ, ಆಸ್ತಿ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಾ.4 ರಂದು ಬೆಂಗಳೂರಿನಲ್ಲಿ ರಸ್ತೆಗಿಳಿದು ಭಾರೀ ಪ್ರತಿಭಟನೆಗಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ವೇಳೆ ಪೋಸ್ಟರ್​, ಸೂಟ್​ಕೇಸ್, ಹಣವಿರುವ ಗುಟ್ಕಾ ಬ್ಯಾಗ್​, ನಕಲಿ ನೋಟ್​ ಪ್ರದರ್ಶಿಸಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ, ವಿಪಕ್ಷನಾಯಕ ಸಿದ್ದರಾಮಯ್ಯ, ಶಾಸಕ ರಾಮಲಿಂಗಾರೆಡ್ಡಿ, ಶಾಸಕ ದಿನೇಶ್​​ ಗುಂಡೂರಾವ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ ಹಾಗೂ ಸಲೀಂ ಅಹ್ಮದ್ ಭಾಗಿಯಾಗಿದ್ದರು.
ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ, ರಾಜ್ಯದಲ್ಲಿ ಇರುವುದು ಭ್ರಷ್ಟಾಚಾರದ ಸರ್ಕಾರ. ಪ್ರತಿಯೊಂದು ಕೆಲಸಕ್ಕೂ 40 ಪರ್ಸೆಂಟ್​​ ಕಮಿಷನ್ ಕೇಳುತ್ತಾರೆ. ರಾಜ್ಯದ ಜನರ ಹಣವನ್ನೂ ಲೂಟಿ ಮಾಡುತ್ತಿದ್ದಾರೆ. ಕಮಿಷನ್ ನೀಡಲಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಮಿಷನ್​ ಬಗ್ಗೆ ಪ್ರಧಾನಿ ಮೋದಿಗೆ ಕೆಂಪಣ್ಣ ದೂರು ನೀಡಿದ್ದಾರೆ. ಆದರೆ ಪ್ರಧಾನಿಗಳಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.
ತಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಏನಾಗುತ್ತಿದೆ. ನಾವು ಎಂದಿಗೂ ಭಯೋತ್ಪಾದನೆಯನ್ನು ಬೆಂಬಲಿಸಿಲ್ಲ. ಕಾಂಗ್ರೆಸ್ ಏಕೆ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು ಅಮಿತ್ ಶಾ ಕೇಳುತ್ತಾರೆ. ಅಮಿತ್ ಶಾ ಕೂಡ ಮಹಾ ಸುಳ್ಳುಗಾರ. ಈ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಗೋಡೆಗಳ ಮೇಲೆ ಪೋಸ್ಟರ್​ ಅಂಟಿಸಿ ಕೈ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನಂತರ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದರು.









































































































error: Content is protected !!
Scroll to Top