ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ; ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ

ಪೇಶ್ವೆ ಮೂಲದ ಮುಖ್ಯಮಂತ್ರಿ ಹೇಳಿಕೆಗೆ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ

ಬೆಂಗಳೂರು : ತಾನು ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಪೇಶ್ವೆ ಮೂಲದವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಜೋಶಿ, ನಾನು ಕುಮಾರಸ್ವಾಮಿ ಹೇಳಿಕೆ ಕುರಿತು ಹೆಚ್ಚಿಗೆ ಏನು ಮಾತನಾಡಲಾರೆ. ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ಅದು ನನ್ನ ಸೌಭಾಗ್ಯವೂ ಹೌದು. ನರೇಂದ್ರ ಮೋದಿಯಂತಹ ನಾಯಕರು ಸಿಗುವುದು ಶತಮಾನಕ್ಕೊಬ್ಬರು. ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆ. ಇಡೀ ವಿಶ್ವವೇ ಮೋದಿಯನ್ನು ನಿಬ್ಬೆರಗಾಗಿ ನೋಡುತ್ತಿದೆ, ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರುವುದಿಲ್ಲ. ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಎಚ್. ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಬಜೆಟ್ ಮಂಡನೆ ವೇಳೆ ಕಾಂಗ್ರೆಸ್‌ ನಾಯಕರು ಕಿವಿ ಮೇಲೆ ಹೂವಿಟ್ಟುಕೊಂಡು ಬಂದ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನವರು ಇನ್ನು ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡ ಅಡ್ಡಾಡಬೇಕಾಗುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದ್ದು, ಅಷ್ಟಿದ್ದರೂ ಕಾಂಗ್ರೆಸ್‌ನವರು ಬಜೆಟ್ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಎಲ್ಲ ಕಡೆ ಜನ ಈಗಾಗಲೇ ಹೂವಿಟ್ಟಿದ್ದು, ಇನ್ನು ಮುಂದೆ ತಾವಾಗಿಯೇ ಹೂವಿಟ್ಟುಕೊಂಡು ಅಡ್ಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.









































































































error: Content is protected !!
Scroll to Top