ಜೂನ್‌ನಲ್ಲಿ ಶೂಟಿಂಗ್ ಆರಂಭ
ಬೆಂಗಳೂರು : ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ ಚಿತ್ರ ಅದ್ಭುತವಾಗಿ ಯಶಸ್ಸು ಕಂಡ ಬಳಿಕ ಎಲ್ಲರೂ ಈಗ ಕಾಂತಾರ-2ರ ನಿರೀಕ್ಷೆಯಲ್ಲಿದ್ದಾರೆ. ಕಾಂತಾರದ ಮುಂದುವರಿದ ಭಾಗ ಯಾವಾಗ ಬರಲಿದೆ ಎಂಬುದು ಸಿನೆಮಾ ಪ್ರೇಮಿಗಳು ಕೇಳುತ್ತಿರುವ ಪ್ರಶ್ನೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರು ಈ ವರ್ಷ ಮಳೆಗಾಲದಲ್ಲೇ ಕಾಂತಾರ-2ರ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ರಿಷಬ್ ಶೆಟ್ಟಿ ಈಗಾಗಲೇ ಕಾಂತಾರ-2ರ ಕತೆ ಬರೆಯಲು ಶುರು ಮಾಡಿದ್ದಾರೆ. ತಮ್ಮ ತಂಡದ ಜತೆ ಅವರು ಕರಾವಳಿ ಕರ್ನಾಟಕದ ಕಾಡಿಗೆ ತೆರಳಿ ರಿಸರ್ಚ್ ನಡೆಸುತ್ತಿದ್ದಾರೆ. ಕಾಂತಾರ-2ಲ್ಲಿ ಕಾಂತಾರ ಆರಂಭ ಆಗುವುದಕ್ಕೂ ಮುನ್ನ ಏನಾಗಿತ್ತು ಎಂಬ ಕತೆ ಇರಲಿದೆ.
ಒಂದಷ್ಟು ದೃಶ್ಯಗಳಿಗೆ ಮಳೆಗಾಲದ ಅಗತ್ಯವಿರುವುದರಿಂದ ಜೂನ್ ತಿಂಗಳಲ್ಲಿ ಶೂಟಿಂಗ್ ಶುರು ಮಾಡಬೇಕು ಎಂದು ರಿಷಬ್ ಶೆಟ್ಟಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಸಿನೆಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ನಮ್ಮದು ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಸಾಧಾರಣ ಬಜೆಟ್ನಲ್ಲಿ ನಿರ್ಮಾಣವಾದ ಕಾಂತಾರ ವಿಶ್ವಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಚಿತ್ರದ ಮುಂದಿನ ಭಾಗದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ನಿರ್ಧರಿಸಿದೆ.
























