ಫಾರ್ಮ್ ಹೌಸ್‌ನಲ್ಲಿ ವಿದೇಶಿ ಹಕ್ಕಿಗಳನ್ನು ಅಕ್ರಮವಾಗಿ ಸಾಕಿದ ಆರೋಪ
ಮೈಸೂರು: ನಟ ದರ್ಶನ್ ತೂಗುದೀಪ, ಪತ್ನಿ ವಿಜಯಲಕ್ಷ್ಮೀ ಮತ್ತು ಅವರ ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ವಿರುದ್ಧ ಅರಣ್ಯ ಇಲಾಖೆ ಕೇಸು ದಾಖಲಿಸಿಕೊಂಡಿದೆ. ಮೈಸೂರಿನ ಟಿ ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ವಲಸೆ ಹಕ್ಕಿಗಳಾದ ಬಾರ್ ಹೆಡ್ಡೆಡ್ ಹೆಬ್ಬಾತುಗಳನ್ನು ದರ್ಶನ್ ಅಕ್ರಮವಾಗಿ ಸಾಕಿದ್ದಾರೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ.
ಫಾರೆಸ್ಟ್ ಮೊಬೈಲ್ ಸ್ಕ್ವಾಡ್ ಫಾರಂಹೌಸ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಆವರಣದಲ್ಲಿ ಇರಿಸಲಾಗಿದ್ದ ನಾಲ್ಕು ಹೆಬ್ಬಾತುಗಳನ್ನು ವಶಪಡಿಸಿಕೊಂಡಿದೆ. ನ್ಯಾಯಾಲಯದ ಅನುಮತಿ ಪಡೆದು ಅರಣ್ಯಾಧಿಕಾರಿಗಳು ಮೈಸೂರು ಸಮೀಪದ ಹದಿನಾರು ಕೆರೆಯಲ್ಲಿ ಪಕ್ಷಿಗಳನ್ನು ಬಿಡಲಿದ್ದಾರೆ.
ದಾಳಿಯ ವೇಳೆ ಫಾರ್ಮ್‌ಹೌಸ್‌ನಲ್ಲಿ ಕಪ್ಪುಹಂಸ, ಆಸ್ಟ್ರಿಚ್, ಎಮು ಮತ್ತಿತರ ಜಾತಿಯ ಪಕ್ಷಿಗಳು ಪತ್ತೆಯಾಗಿದ್ದು, ಈ ಪಕ್ಷಿಗಳನ್ನು ಹೊಂದಲು ಅಗತ್ಯವಿರುವ ದಾಖಲೆಗಳನ್ನು ನೀಡುವಂತೆ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ. ಈ ಪಕ್ಷಿಗಳನ್ನು ಸಾಕಬಹುದು. ಆದರೆ, ಮಾಲೀಕರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು.
ದರ್ಶನ್ ಫಾರ್ಮ್‌ಹೌಸ್‌ಗೆ ಭೇಟಿ ನೀಡಿದ ಸಂದರ್ಶಕರು ಹೆಬ್ಬಾತುಗಳ ಬಗ್ಗೆ ಮಾತನಾಡುತ್ತಿರುವ ವೀಡಿಯೊ ವೈರಲ್ ಆದಾಗ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಹಕ್ಕಿಗಳನ್ನು ಸಾಕಿರುವ ವಿಚಾರ ಬೆಳಕಿಗೆ ಬಂದಿದೆ.
























