ಸಾಂಸ್ಕೃತಿಕ ರಸದೌತಣದ ಜೊತೆಗಿರಲಿದೆ ಸ್ವಾದಿಷ್ಟಕರ ಆಹಾರ
ವರದಿ: ನಳಿನಿ ಎಸ್. ಸುವರ್ಣ
ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದ ವೇಳೆ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣದೊಂದಿಗೆ ತರಹೇವಾರಿ ಆಹಾರವೂ ಜನರನ್ನು ತಣಿಸಲಿದೆ. ಸಚಿವ ವಿ. ಸುನೀಲ್ ಕುಮಾರ್ ಅವರ ಪರಿಕಲ್ಪನೆಯಂತೆ ನಡೆಯಲಿರುವ ಅಮೋಘ ಕಾರ್ಯಕ್ರಮದ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿದೆ. ಮನಸೂರೆಗೊಳಿಸುವ ಕಾರ್ಯಕ್ರಮಗಳ ಜೊತೆಗೆ ಆಹಾರ ಮೇಳವೂ ಒಂದು ಪ್ರಮುಖ ಆಕರ್ಷಣೆಯಾಗಿರಲಿದೆ.

5 ದಿನ – ಆಹಾರ ಮೇಳ
ಬೈಲೂರು ಹೈಸ್ಕೂಲಿನ ಮೈದಾನದಲ್ಲಿ ನಡೆಯುವ ಆಹಾರ ಮೇಳವು 5 ದಿನಗಳ ಕಾಲ ನಡೆಯಲಿದೆ. ಜ. 25 ರ ಸಂಜೆ ಆಹಾರ ಮೇಳಕ್ಕೆ ಚಾಲನೆ ದೊರೆಯಲಿದ್ದು ಜ. 29ರ ವರೆಗೆ ಇರಲಿದೆ. ವೈವಿಧ್ಯಮಯ, ರುಚಿರುಚಿಯಾದ ಸಸ್ಯಾಹಾರ ಹಾಗೂ ಮಾಂಸಹಾರ ಆಹಾರ ಮಳಿಗೆಗಳು ತೆರೆಯಲಿದೆ. ಈಗಾಗಲೇ 22 ಹೊಟೇಲ್, 7 ಐಸ್ ಕ್ರೀಮ್ ಕೌಂಟರ್, 2 ಫ್ರೂಟ್ಸ್ ಕೌಂಟರ್, ಚಾಟ್ಸ್, ಜ್ಯೂಸ್ ಕೌಂಟರ್, ಮಿಲ್ಕ್ ಪಾರ್ಲರ್, ಕೇಕ್ ಸ್ಟಾಲ್‌ಗಳು ನಿರ್ಮಾಣಗೊಂಡಿದೆ.
ಉಸ್ತುವಾರಿ
ಕಳೆದ ವರ್ಷ ಮಾರ್ಚ್ 10ರಿಂದ 20ರ ವರೆಗೆ ಜರುಗಿದ ಕಾರ್ಕಳ ಉತ್ಸವ ಸಂದರ್ಭ ಆಹಾರ ಮೇಳ ಪ್ರಮುಖ ಆಕರ್ಷಣೆಯಾಗಿ ಕಂಡಿತು. ಸ್ವಾದಿಷ್ಟಕರ ಆಹಾರ ಸವಿಯಲು ಜನ ಮುಗಿಬೀಳುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ಕಾರ್ಕಳ ಉತ್ಸವದ ಯಶಸ್ಸಿನಲ್ಲಿ ಆಹಾರ ಮಳಿಗೆಗಳ ಪಾತ್ರವೂ ಇತ್ತು. ಅಂದು ಆಹಾರ ಮಳಿಗೆಗಳ ಉಸ್ತುವಾರಿ ವಹಿಸಿದ್ದ ಬೋಳ ಪ್ರಸಾದ್ ಕಾಮತ್, ರೆಂಜಾಳ ಅನಂತಕೃಷ್ಣ ಶೆಣೈ, ರಮೇಶ್ ಕಿಣಿ, ಯುವರಾಜ್ ಶೆಟ್ಟಿ, ಪ್ರದೀಪ್ ಕುಮಾರ್ ಹಾಗೂ ಕವನ್ ಹೆಗ್ಡೆ ಈ ಬಾರಿಯೂ ಆಹಾರ ಮೇಳದ ಉಸ್ತುವಾರಿ ವಹಿಸಿರುತ್ತಾರೆ.
ತುಳುನಾಡಿನ ಐತಿಹಾಸಿಕ ಕ್ಷಣಗಳಲ್ಲಿ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯೂ ಒಂದು. ಅಭೂತಪೂರ್ವ ಕಾರ್ಯಕ್ರಮದ ಸಂದರ್ಭ ವಿವಿಧ ಖಾದ್ಯಗಳ ಪರಿಚಯವಾಗಲಿದೆ. ಹೊರ ಜಿಲ್ಲೆಗಳಿಂದ ಬರುವ ಜನತೆಗೆ ಇಲ್ಲಿನ ಆಹಾರದ ರುಚಿಯನ್ನು ಸವಿಯಲು ಇದು ಒಂದೊಳ್ಳೆ ಅವಕಾಶ ಎಂದು ಆಹಾರ ಸಮಿತಿಯ ಪ್ರಬಂಧಕರಾದ ಪ್ರಸಾದ್ ಕಾಮತ್ ಹಾಗೂ ಅನಂತಕೃಷ್ಣ ಶೆಣೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.




















