ಯಕ್ಷ ರಂಗಾಯಣ ಅಭಿನಯದ ಪರಶುರಾಮ ನಾಟಕ ಪ್ರಥಮ ಪ್ರದರ್ಶನ
ಕಾರ್ಕಳ : ಯಕ್ಷ ರಂಗಾಯಣದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಕಾರ್ಕಳ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಜ. 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನ ವನರಂಗ ವೇದಿಕೆಯಲ್ಲಿ ನಾಟಕೋತ್ಸವ ಜರುಗಲಿದೆ.
ಜ. 9 ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟನೆ ಮಾಡಲಿರುವರು. ಯಕ್ಷ ರಂಗಾಯಣದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ನಾಟಕಕಾರ ಶಶಿರಾಜ್ ರಾವ್ ಕಾವೂರು ಉಪಸ್ಥಿತರಿರಲಿದ್ದಾರೆ ಎಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೂರು ಅತ್ಯುತ್ತಮ ನಾಟಕಗಳ ನಾಟಕೋತ್ಸವ
ಜ.9 ರಂದು ಸಂಜೆ 6.35 ರಿಂದ ಯಕ್ಷ ರಂಗಾಯಣ ಕಾರ್ಕಳ ಇದರ ಸಂಚಾರಿ ರಂಗ ತಂಡ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ರಚಿಸಿರುವ, ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ ಪರಶುರಾಮ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ. ಜ.10 ರಂದು ಸಂಜೆ 6.30 ಗಂಟೆಗೆ ಶಿವಮೊಗ್ಗ ರಂಗಾಯಣ ತಂಡ ಅಭಿನಯಿಸುವ ಸ್ವಾತಂತ್ರ್ಯ ಸಂಗ್ರಾಮದ ನೈಜಕತೆಯಾಧಾರಿತ, ಡಾ. ಸಾಸ್ವೆಹಳ್ಳಿ ಸತೀಶ್ ರಚಿಸಿರುವ ಶ್ರೀಪಾದ ಮತ್ತು ಶಿವಶಂಕರ ತೀರ್ಥಹಳ್ಳಿ ನಿರ್ದೇಶನದ ಈಸೂರ ಕೊಡೆವು ನಾಟಕ ಪ್ರದರ್ಶನಗೊಳ್ಳಲಿದೆ. ಜ.11 ರಂದು ಸಂಜೆ 6.30 ಗಂಟೆಗೆ ಶಿವಮೊಗ್ಗ ರಂಗಾಯಣ ತಂಡದಿಂದ ಗಣೇಶ್ ಮಂದರ್ತಿ ಮತ್ತು ಶ್ರವಣ್ ಹೆಗ್ಗೋಡು ನಿರ್ದೇಶನದ ನಾ.ಡಿಸೋಜಾ ಅವರ ಕಾದಂಬರಿ ಹಾಗೂ ಎಸ್.ಮಾಲತಿ ಯವರ ಹಕ್ಕಿಗೊಂದು ಗೂಡು ಕೊಡಿ ನಾಟಕ ಆಧಾರಿತ ಹಕ್ಕಿ ಕಥೆ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದೆ.


ರಾಜ್ಯಾಂದ್ಯಂತ ಪರಶುರಾಮ ನಾಟಕ ಪ್ರದರ್ಶನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್‌ರವರ ಆಶಯದಂತೆ ನಿರ್ಮಾಣಗೊಂಡಿರುವ ಪರಶುರಾಮ ನಾಟಕ ರಾಜ್ಯಾದ್ಯಂತ ಸಂಚರಿಸಲಿದ್ದು, ಬೈಲೂರಿನಲ್ಲಿ ಜ. 28 ರಂದು ಲೋಕಾರ್ಪಣೆಗೊಳ್ಳಲಿರುವ ಪರಶುರಾಮ ಥಿಂ ಪಾರ್ಕ್‌ಗೆ ಪೂರಕವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ನಾಟಕದ ಪ್ರದರ್ಶನ ನಡೆಯಲಿದೆ ಎಂದು ಯಕ್ಷರಂಗಾಯಣ ಪ್ರಕಟನೆಯಲ್ಲಿ ತಿಳಿಸಿದೆ.




















