ಸುಳ್ಯ : ಬೆಳ್ಳಾರೆ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ಮಾಧವ ಗೌಡ ಅವರ ಮಗ ನವೀನ್ ಗೌಡರನ್ನು ಸೋಮವಾರ ಮಧ್ಯಾಹ್ನ ಅಪಹರಣ ಮಾಡಲಾಗಿತ್ತು. ಆಂಬುಲೆನ್ಸ್ ಸಹಿತ ಮೂರ್ನಾಲ್ಕು ವಾಹನಗಳಲ್ಲಿ ಬಂದ ಅಪರಿಚಿತರು ನವೀನ್ ಅವರನ್ನು ಬಲವಂತವಾಗಿ ಕರೆದೋಯ್ದಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನವೀನ್ ತಾಯಿ ದೂರು ದಾಖಲಿಸಿದ್ದರು.
ಘಟನೆಯ ಸಂದರ್ಭದಲ್ಲಿ ನವೀನ್ ಅವರ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞಾ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆಯ ವಿವರ
ಸೋಮವಾರ ಮಧ್ಯಾಹ್ನ ಬೆಳ್ಳಾರೆಯ ತನ್ನ ಕಚೇರಿಯಿಂದ ನವೀನ್ ಮನೆಗೆ ಆಗಮಿಸಿದ್ದರು. ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಆಂಬ್ಯುಲೆನ್ಸ್‌ನಲ್ಲಿ ಬಂದ ಕೆಲವರು ಬಲತ್ಕಾರವಾಗಿ ನವೀನ್ ಕಾರಿನಲ್ಲಿ ಕುಳ್ಳಿರಿಸಿ ಕೊಂಡೊಯ್ದಿರುತ್ತಾರೆ. ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞ ತಡೆಯಲು ಬಂದಿದ್ದು, ಆ ಸಂದರ್ಭ ಅವರ ನಡುವೆ ಹೊಡೆದಾಟ ನಡೆಯಿತು ಎಂದು ಹೇಳಲಾಗುತ್ತಿದೆ. ಅಪರಿಚಿತರು ನವೀನ್ ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಹೋಗಿರುತ್ತಾರೆ ಎನ್ನಲಾಗುತ್ತಿದೆ. ಗಾಯಗೊಂಡ ತಾಯಿ ಮತ್ತು ಅಣ್ಣ ವಿನ್ಯಾಸ್ ಬೆಳ್ಳಾರೆ ಪೊಲೀಸರಿಗೆ ಘಟನೆ ಕುರಿತು ತಿಳಿಸಿದ್ದಾರೆ. ಅಪಹರಿಸಲಾದ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ತಂಡದವರು ತಮ್ಮ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಮಾಹಿತಿ ರವಾನಿಸಿದ್ದು, ಅದರ ಆಧಾರದ ಮೇರೆಗೆ ಶುಂಠಿಕೊಪ್ಪದ ಬಳಿ ನವೀನ್ ಇದ್ದ ಆಂಬ್ಯುಲೆನ್ಸ್ ಹೋಗುತ್ತಿದ್ದಾಗ ತಡೆದು ನಿಲ್ಲಿಸಲಾಗಿದೆ. ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿನ ಪೊಲೀಸರಿಗೆ ಒಪ್ಪಿಸಿರುವುದಾಗಿ ಮಾಹಿತಿ ಇದೆ. ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಘಟನೆಯೊಂದರ ಬಳಿಕ ನವೀನ್ ಅವರಿಗೆ ಅವರ ಪತ್ನಿಯಲ್ಲಿ ವಿರಸ ಮೂಡಿತ್ತು ಎಂದು ತಿಳಿದುಬಂದಿದೆ.





















