ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮ

ಕಲೆ ಮತ್ತು ಸಂಸ್ಕೃತಿಯಿಂದ ಉತ್ತಮ ನಾಗರಿಕ ಸಮಾಜ ನಿರ್ಮಾಣ : ವಿ. ಸುನಿಲ್‌ ಕುಮಾರ್‌

ಕಾರ್ಕಳ : ಅಭಿವೃದ್ಧಿ ಅಂದರೆ ಕೇವಲ ರಸ್ತೆ, ಸೇತುವೆ ನಿರ್ಮಾಣ ಮಾತ್ರವಲ್ಲ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹೀಗೆ ಪ್ರತಿಯೊಂದು ಕ್ಷೇತ್ರಗಳ ಪ್ರಗತಿಯಾಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದಾಗ ಮಾತ್ರ ಕಾರ್ಕಳವನ್ನು ಬ್ರಾಂಡ್‌ನನ್ನಾಗಿ ಮಾಡುವ ಸಂಕಲ್ಪ ಈಡೇರುತ್ತದೆ. ಸಾಹಿತ್ಯ, ಉದ್ದಿಮೆ, ಆಡಳಿತ, ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವುದರಿಂದ ಇನ್ನಷ್ಟು ಸಾಧಕರು ಬೆಳಕಿಗೆ ಬರುತ್ತಾರೆ. ಕಲೆ ಮತ್ತು ಸಂಸ್ಕೃತಿ ಆಧಾರಿತ ಚಟುವಟಿಕೆಗಳಿಂದ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಸಾಹಿತ್ಯ ಹಾಗೂ ಕಲಾಭಿಮಾನಿಗಳ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಎಂ. ಪ್ರಭಾಕರ್‌ ಜೋಶಿ, ಹೋಟೆಲ್‌ ಉದ್ದಿಮೆಯಲ್ಲಿ ಯಶಸ್ಸು ಸಾಧಿಸಿದ ಜಯರಾಮ್‌ ಬನಾನ್‌ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್‌. ಮಂಜುನಾಥ ಅವರಿಗೆ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಡಿನಲ್ಲಿ ನಶಿಸಿ ಹೋಗುತ್ತಿರುವ ಹಾಗೂ ಸಮಾಜಕ್ಕೆ ಪೂರಕವಾದಂತಹ ಕಲೆಗಳನ್ನು, ಸಂಸ್ಕೃತಿಯನ್ನು ಉಳಿಸುವ ಕನ್ನಡ ಸಂಸ್ಕೃತಿ ಮತ್ತು ಮೂಲ ಸಂಸ್ಕೃತಿ ಎಂಬ ಅಭಿಯಾನ ಮುಂದಿನ ದಿನಗಳಲ್ಲಿ ಚಾಲನೆಗೊಳ್ಳಲಿದೆ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಸಂಗ್ರಹಿಸಿ, ದಾಖಲೀಕರಣಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ. ಸಾಧಕರಿಗೆ ಸಲ್ಲಿಸುವ ಸನ್ಮಾನ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಹಾಗೂ ಸಾಧಕರ ಸೇವೆ, ಅನುಭವ ನಾಡಿಗೆ ಲಭಿಸಲಿ. ಈ ರೀತಿಯಾದಲ್ಲಿ ಮಾತ್ರ ಸ್ವರ್ಣ ಕಾರ್ಕಳದ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುವ ಮೂಲಕ ಇನ್ನಷ್ಟು ಜನತೆಗೆ ಪ್ರೇರಣೆ ನೀಡುವಂತಹ ಕಾರ್ಯ ಶ್ಲಾಘನೀಯ. ಪುರಸ್ಕೃತರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ
ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕು ಪೂಜಾರಿ, ಬಾಬು ಕೆ. ಸಾಂತೂರು, ಗಣೇಶ್‌ ನಾಯಕ್‌ ಎಣ್ಣೆಹೊಳೆ, ಕೆ. ಸುಬ್ರಮಣ್ಯ ಆಚಾರ್ಯ ಹಿರಿಯಂಗಡಿ, ಟಿ. ರಾಮಚಂದ್ರ ನಾಯಕ್‌, ಡಾ. ಸುನೀಲ್‌ ಮುಂಡ್ಕೂರು ಹಾಗೂ ಶಾರದ ಪೂಜಾ ಸಮಿತಿಯನ್ನು ಈ ಸಂದರ್ಭ ಗೌರವಿಸಲಾಯಿತು.

ಆನೆಕರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್‌ ಕೋಟ್ಯಾನ್‌ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಶ್ರೀರಾಮ್‌ ಭಟ್‌, ಸಾಯಿನಾಥ್‌ ಶೆಟ್ಟಿ ಹಾಗೂ ಗುಣಪಾಲ ಕಡಂಬ ಅವರು ಸಾಧಕರ ಪರಿಚಯ ವಾಚಿಸಿದರು. ಆರತಿ ಪೈ. ಪ್ರಾರ್ಥಿಸಿದರು. ವಿಶ್ರಾಂತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿ, ಸಾಣೂರು ಗ್ರಾ. ಪಂ. ಸದಸ್ಯ ಕರುಣಾಕರ್‌ ಕೋಟ್ಯಾನ್‌ ನಿರೂಪಿಸಿದರು. ಶ್ರೀ. ಕ್ಷೇ. ಧ. ಗ್ರಾ. ಯೋಜನಾಧಿಕಾರಿ ಭಾಸ್ಕರ್‌ ವಿ. ವಂದಿಸಿದರು.























error: Content is protected !!
Scroll to Top