250 ಭಾರತೀಯ ಚಿತ್ರಗಳ ಪೈಕಿ ನಂಬರ್ ಒನ್ ಸ್ಥಾನದ ಹಿರಿಮೆ
ಬೆಂಗಳೂರು : ದೇಶ ವಿದೇಶದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಚಿತ್ರದ ಯಶಸ್ಸಿಗೆ ಮತ್ತೊಂದು ಗರಿ ಮೂಡಿದೆ. ಕಾಂತಾರ ಇದೀಗ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇತ್ತೀಚೆಗೆ IMDb ಟಾಪ್ 250 ಚಲನಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಅಲ್ಲಿ ಕಾಂತಾರ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಶುಕ್ರವಾರದಿಂದ ವೀಕ್ಷಕರ ಸಂಖ್ಯೆಯು ಶೇ. 50ರಷ್ಟು ಹೆಚ್ಚಾಗಿದೆ.
ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿರುವ ಕಾಂತಾರ ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6ನೇ ಕನ್ನಡ ಚಿತ್ರವಾಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹಾಲ್‌ಗಳು ಇನ್ನೂ ತುಂಬಿ ತುಳುಕುತ್ತಿವೆ.
ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಲಿದೆ.
ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕಾಂತಾರವನ್ನು ಹೊಗಳಿದ್ದಾರೆ. ಕಾಂತಾರ ಚಿತ್ರ ಎಲ್ಲಾ ಕಡೆಯಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ. ಪ್ರಮುಖ ಸೆಲೆಬ್ರಿಟಿಗಳಾದ ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಮತ್ತು ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.