ಮುಂದಿನ ರಾಷ್ಟ್ರಪತಿ ಚುನಾವಣೆಗೆ ಬಿರುಸಿನ ತಯಾರಿಗಳು ನಡೆಯುತ್ತಿವೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟವ ಅಚ್ಚರಿಯ ನಡೆಯಲ್ಲಿ ಜಾರ್ಖಂಡ್ ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಹೆಸರನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಒಕ್ಕೂಟ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳೀಸಿದೆ. ಬಿಜೆಪಿ ಒಕ್ಕೂಟಕ್ಕೆ 48% ಮತಗಳು ಇರುವ ಕಾರಣ ದ್ರೌಪದಿ ಮುರ್ಮು ಮುಂದಿನ ರಾಷ್ಟ್ರಪತಿ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಅಂದರೆ ಮೊತ್ತಮೊದಲ ಬುಡಕಟ್ಟು ಜನಾಂಗದ ಮಹಿಳೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಲು ವೇದಿಕೆ ಸಿದ್ಧ ಆಗಿದೆ.
ಬಿಜೆಪಿಯ ಜಾಣ ನಡೆ
ದ್ರೌಪದಿ ಆಯ್ಕೆಯ ಹಿಂದೆ ಬಿಜೆಪಿಯ ಜಾಣ ನಡೆ ಎದ್ದು ಕಾಣುತ್ತಿದೆ. ಈ ಹಿಂದೆ ಅಲ್ಪಸಂಖ್ಯಾತ ಅಭ್ಯರ್ಥಿ ಆಗಿ ಅಬ್ದುಲ್ ಕಲಾಂ, ದಲಿತ ಅಭ್ಯರ್ಥಿ ಆಗಿ ರಾಮನಾಥ್ ಕೋವಿಂದ್ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ ಬಿಜೆಪಿ ಈ ಬಾರಿ ಬುಡಕಟ್ಟು ಜನಾಂಗದ ಮಹಿಳೆ ಎಂಬ ಟ್ರಂಪ್ ಕಾರ್ಡ್ ಎಸೆದು ಪ್ರಬಲ ಸಂದೇಶವನ್ನು ದೇಶಕ್ಕೆ ನೀಡಿದೆ. ಬಿಜೆಪಿ ಯಾವಾಗಲೂ ಮುಂದುವರಿದ ಜಾತಿಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಕಿತ್ತು ಬಿಸಾಡುವ ಪ್ರಯತ್ನ ಮಾಡಿದೆ.
ಅತ್ಯಂತ ತಳಸ್ಪರ್ಶಿಯಾದ ಮತ್ತು ಶತಮಾನಗಳಿಂದ ತುಳಿತಕ್ಕೆ ಒಳಗಾದ ಜನಾಂಗಕ್ಕೆ ಅತ್ಯುನ್ನತ ಹುದ್ದೆ ನೀಡುವುದು ಅಂದರೆ ಅದು ಮುಂದಿನ ಲೋಕಸಭಾ ಚುನಾವಣೆಗೂ ಅನುಕೂಲಕರ ಎನ್ನುವುದು ಅವರಿಗೆ ಗೊತ್ತಿದೆ. ಅದರ ಜೊತೆಗೆ ಬಿಹಾರ್, ಜಾರ್ಖಂಡ್ ರಾಜ್ಯಗಳಲ್ಲಿ ಗಟ್ಟಿಯಾಗಿ ಹೆಜ್ಜೆ ಊರುವುದು ಕೂಡ ಅವರ ಉದ್ದೇಶ ಅನ್ನುವುದು ಸ್ಪಷ್ಟ. ಅದರಲ್ಲಿ ಕೂಡ ಜಾರ್ಖಂಡ್ ರಾಜ್ಯಪಾಲೆ ಆಗಿ ದ್ರೌಪದಿ ಐದು ವರ್ಷಗಳ ಅವಧಿ ಪೂರ್ತಿ ಮಾಡಿದ್ದು ಅವರ ದಕ್ಷತೆ ಮತ್ತು ಗಟ್ಟಿತನಗಳ ಬಗ್ಗೆ ಎರಡು ಮಾತೇ ಇಲ್ಲ. ಅದರ ಜೊತೆಗೆ ಅವರು ವಾಜಪೇಯಿ ಕ್ಯಾಬಿನೆಟಲ್ಲಿ ಕೂಡ ಸಚಿವರಾಗಿ ಕೇಂದ್ರದ ಅನುಭವ ಕೂಡ ಇದೆ. ಅವರ ಪಕ್ಷ ನಿಷ್ಠೆ ಕೂಡ ಪ್ರಶ್ನಾತೀತ. ಆದ್ದರಿಂದ ಈ ಆಯ್ಕೆ ತುಂಬಾ ದೂರದೃಷ್ಟಿಯಿಂದ ಕೂಡಿದೆ.
ಪಕ್ಷ ನಿಷ್ಠೆ ಇಲ್ಲದ ಯಶವಂತ್ ಸಿನ್ಹಾ
ಮತ್ತೊಂದು ಕಡೆ ಯಶವಂತ್ ಸಿನ್ಹಾ ಅವರು ನಿವೃತ್ತ ಐಎಎಸ್ ಅಧಿಕಾರಿ. ಗಟ್ಟಿತನ ಕೂಡ ಇದೆ. ಆದರೆ ಪಕ್ಷ ನಿಷ್ಠೆ ಮತ್ತು ತತ್ವ ನಿಷ್ಠೆಗೆ ಬಂದಾಗ ಅವರು ಹಿಂದೆ ನಿಲ್ಲುತ್ತಾರೆ. ಅವರು ಮೊದಲು ಜನತಾ ದಳದಲ್ಲಿ ಇದ್ದರು. ಮುಂದೆ ಬಿಜೆಪಿಗೆ ಬಂದರು. ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದರು. ವಾಜಪೇಯಿ ಕ್ಯಾಬಿನೆಟಲ್ಲಿ ವಿತ್ತ ಸಚಿವ ಆದರು. ಮುಂದೆ ಬಿಜೆಪಿಯಲ್ಲಿ ಬಂಡಾಯ ನಾಯಕರಾದರು. ಮೋದಿ ಪ್ರಧಾನಿಯಾಗಿ ಆಯ್ಕೆ ಆದಾಗ ಸಚಿವ ದಕ್ಕದಿರುವುದು ಅವರಿಗೆ ಸಹಿಸಿಕೊಳ್ಳಲು ಕಷ್ಟ ಆಯಿತು. ನಿರಂತರ ಕೆಂಡ ಕಾರುವ ಕೆಲಸ ಮಾಡಿದರು. ಮುಂದೆ ಪಕ್ಷವನ್ನು ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಹೋದರು. ಮೋದಿ ಸರಕಾರ ಮಾಡಿದ್ದೆಲ್ಲವನ್ನೂ ಖಂಡಿಸಿದರು. ಸರಕಾರದ ವಿರುದ್ಧ ಬೃಹತ್ ರಾಲಿ ಸಂಘಟನೆ ಮಾಡಿದರು. ಅವರು ಈ ಬಾರಿ ರಾಷ್ಟ್ರಪತಿ ಅಭ್ಯರ್ಥಿ ಆಗಿ ಕಣದಲ್ಲಿ ಇದ್ದಾರೆ. ಅವರಿಗೆ ವಯಸ್ಸು 84 ಅನ್ನುವುದು ಕೂಡ ಒಂದು ಮೈನಸ್ ಅಂಶ. ಅವರ ಕ್ಷಣ ಕ್ಷಣಕ್ಕೆ ಬಣ್ಣ ಬದಲಾಯಿಸುವ ಗುಣವನ್ನು ಭಾರತದ ನಾಯಕರು ನೋಡಿದ್ದಾರೆ. ಅದರ ಜೊತೆಗೆ ಕಾಂಗ್ರೆಸ್ ಒಕ್ಕೂಟಕ್ಕೆ ಬಹುಮತ ಇಲ್ಲ ಅನ್ನುವುದು ಅವರಿಗೇ ಗೊತ್ತಿದೆ. ಹೀಗಾಗಿ ಫಲಿತಾಂಶ ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕವೇ ಆಯ್ಕೆಯಾದರೆ ಅದಕ್ಕೊಂದು ಮೌಲ್ಯ.