ಶಸ್ತ್ರಚಿಕಿತ್ಸೆ ಬಳಿಕ ದಿಗಂತ್‌ ಚೇತರಿಕೆ

ಬೆಂಗಳೂರು: ಗೋವಾದಲ್ಲಿ ಮಂಗಳವಾರ ಜಿಗಿಯುವಾಗ ಬಿದ್ದು ಕುತ್ತಿಗೆ ಹಾಗೂ ಬೆನ್ನಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಸ್ಯಾಂಡಲ್​ವುಡ್ ನಟ ದಿಗಂತ್​​ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗ ದಿಗಂತ್ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳಿಂದ ದೂದ್ ಪೇಡಾ ಎಂದೇ ಕರೆಸಿಕೊಳ್ಳುವ ದಿಗಂತ್, ಚಿತ್ರೀಕರಣದಿಂದ ಬಿಡುವು ಪಡೆದು ಪತ್ನಿ ಐಂದ್ರಿತಾ ರೈ ಹಾಗೂ ಪೋಷಕರೊಂದಿಗೆ ಗೋವಾ ಟ್ರಿಪ್ ತೆರಳಿದ್ದರು. ಸಮುದ್ರ ತಾಣದಲ್ಲಿ ಸ್ಟಂಟ್‌ ಮಾಡುವಾಗ ಬಿದ್ದು ಕುತ್ತಿಗೆ ಹಾಗೂ ಬೆನ್ನಿಗೆ ಪೆಟ್ಟಾಗಿ ಮೂಳೆ ಮುರಿದಿತ್ತು. ನೋವು ಹೆಚ್ಚಾದ ಕಾರಣ ಗೋವಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಗೋವಾ ಮುಖ್ಯಮಂತ್ರಿ ಪ್ರಮೋದ್​​ ಸಾವಂತ್ ಅವರ ಸಹಾಯ ಪಡೆದು ಹೆಲಿಕಾಪ್ಟರ್ ಮೂಲಕ ದಿಗಂತ್ ಅವರನ್ನು ಬೆಂಗಳೂರಿಗೆ ಏರ್​​​ ಲಿಫ್ಟ್ ಮಾಡಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ನಿನ್ನೆ ರಾತ್ರಿ ಸುಮಾರು 3 ತಾಸು ದಿಗಂತ್​​​ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ‘ದಿಗಂತ್ ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ. ತಜ್ಞ ವೈದ್ಯರ ತಂಡ ನಟ ದಿಗಂತ್​​ಗೆ ಚಿಕಿತ್ಸೆ ನೀಡುತ್ತಿದೆ. 2-3 ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಿದ್ದೇವೆ’ ಎಂದಿದ್ದಾರೆ.







































error: Content is protected !!
Scroll to Top