ರಾಜ್ಯಸಭಾ ಚುನಾವಣೆ ಫಲಿತಾಂಶ ಬಂದಿದೆ. ನಿರೀಕ್ಷೆಸಿದಂತೆ ಬಿಜೆಪಿ ಎರಡು ಸೀಟ್, ಕಾಂಗೆಸ್ ಒಂದು ಸೀಟ್ ಗೆದ್ದಿದೆ. ಆದರೆ ಅಚ್ಚರಿಯ ಫಲಿತಾಂಶದಲ್ಲಿ ಬಿಜೆಪಿ ತನ್ನ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಂಡು ಬಂದಿದೆ. ಇವತ್ತು ಯಾರಿಗಾದರೂ ಮುಖಭಂಗ ಆಗಿದೆ ಎಂದಾದರೆ ಅದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ!
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಗೆಲ್ಲುವಷ್ಟು ಮತಗಳು ಇರಲಿಲ್ಲ. ಬಹಿರಂಗ ಮತದಾನ ಆದ ಕಾರಣ ಬೇರೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ಅದಕ್ಕೆ ಸಾಧ್ಯ ಆಗಲಿಲ್ಲ. ಅವರದ್ದೇ ಪಕ್ಷದಿಂದ ಒಂದು ಅಡ್ಡ ಮತದಾನ ಆಗಿರುವ ಕಾರಣ ಸಣ್ಣ ನೋವು ಬಿಟ್ಟರೆ ಜೆಡಿಎಸ್ ಪಕ್ಷಕ್ಕೆ ಕಳೆದುಕೊಳ್ಳುವುದು ಏನೂ ಇಲ್ಲ.
ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಆಗಿದ್ದ ಮನ್ಸೂರ್ ಆಲಿ ಖಾನ್ ಅವರನ್ನು ನಿಲ್ಲಿಸಿದ್ದು ಸಿದ್ದು. ಅದಕ್ಕೆ ಡಿಕೆಶಿ ಬಣದ ಸಮ್ಮತಿ ಇರಲಿಲ್ಲ. ಖರ್ಗೆ ಬಣದವರು ಅದನ್ನು ಹೈಕಮಾಂಡ್ ವರೆಗೆ ತೆಗೆದುಕೊಂಡು ಹೋಗಿ ತೆಗೆಸಲು ಪ್ರಯತ್ನ ಮಾಡಿದ್ದರು. ಜೆಡಿಎಸ್ ಕಾಂಗ್ರೆಸ್ ಜೊತೆಯಾಗಿ ಹೋದರೆ ನಾಲ್ಕನೇ ಸ್ಥಾನವನ್ನು ಸುಲಭದಲ್ಲಿ ಗೆಲ್ಲಬಹುದು ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಹೈಕಮಾಂಡಗೆ ಮನವರಿಕೆ ಮಾಡಿದ್ದರು. ಡಿಕೆಶಿ ಅವರು ನಿನ್ನೆಯವರೆಗೂ ನಾವು ಹಿಂದಿನದು ಮರೆತು ಜೊತೆಯಾಗಿ ಹೋಗೋಣ ಎಂದೇ ಜೆಡಿಎಸ್ ಪಕ್ಷಕ್ಕೆ ಹೇಳಿಕೊಂಡು ಬಂದಿದ್ದರು. ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋಗಿದ್ದ ಕಾರಣ ದ್ವಿಮುಖ ಮಾತುಕತೆ ಆಗಿಲ್ಲ ಎಂಬುದನ್ನು ಬಿಟ್ಟರೆ ಡಿಕೆಶಿ ಒಲವು ಜೊತೆಗೆ ಹೋಗೋಣ ಎಂದೇ ಇತ್ತು. ಆದರೆ ಸಿದ್ದು ಅದನ್ನು ಒಪ್ಪದೇ ಹಟಕ್ಕೆ ಬಿದ್ದರು.

ಅವರಿಗೆ ಎರಡು ಅಜೆಂಡಾ ಇತ್ತು. ಒಂದು ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿ ಹೇಗಾದರೂ ಗೆಲ್ಲಿಸಿಕೊಂಡು ಬರುವುದು. ಅದು ಸಾಧ್ಯ ಆಗದೆ ಹೋದರೆ ನೋಡಿ, ಜೆಡಿಎಸ್ ಪಕ್ಷ ಸಪೋರ್ಟ್ ಮಾಡದೆ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದರು ಎಂದು ಬಹಿರಂಗವಾಗಿ ಹೇಳಿಕೊಂಡು ಬರುವುದು. ಜೆಡಿಎಸ್ ಪಕ್ಷಕ್ಕೆ ಅಲ್ಪ ಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವುದು. ಆದರೆ ಇದೀಗ ಆ ಎರಡೂ ಆಸೆಗಳು ಪೂರ್ತಿ ಆಗುವ ಲಕ್ಷಣ ಇಲ್ಲ. ಕೊನೆಯ ಪ್ರಯತ್ನವಾಗಿ ಜೆಡಿಎಸ್ ಶಾಸಕರು ಸಿದ್ದು ಅವರ ಆತ್ಮಸಾಕ್ಷಿಯ ಕರೆಗೂ ಕ್ಯಾರೇ ಅನ್ನಲಿಲ್ಲ. ಅಲ್ಲಿಗೆ ಕಾಂಗ್ರೆಸ್ ಪಕ್ಷಕ್ಕೆ, ಅದರಲ್ಲಿಯೂ ಸಿದ್ದರಾಮಯ್ಯ ಅವರ ಇಮೇಜಿಗೆ ಡ್ಯಾಮೇಜ್ ಆಗಿದೆ. ಇನ್ನು ಡಿಕೆಶಿ, ಖರ್ಗೆ ಮೊದಲಾದವರು ಸೇರಿ ಸೋಲಿನ ಕಿರೀಟವನ್ನು ಸಿದ್ದು ತಲೆಗೆ ಖಂಡಿತವಾಗಿಯೂ ಕಟ್ಟುತ್ತಾರೆ. ಅಲ್ಲಿಗೆ ಸಿದ್ದು ತಮ್ಮ ಪಕ್ಷದಲ್ಲಿ ಹಿನ್ನಡೆ ಕಾಣುವುದು ಖಂಡಿತ.
ಬಿಜೆಪಿ ಈ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದೆ. ಒಂದೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಟ್ಟಿದೆ. ಹೈಕಮಾಂಡ್ ಲೆಕ್ಕಾಚಾರ ವರ್ಕ್ ಔಟ್ ಆಗಿದೆ. ಜಾತಿ ಲೆಕ್ಕಾಚಾರಕ್ಕೆ ಹೋಗದೆ ನೇರವಾಗಿ ಚುನಾವಣೆ ಎದುರಿಸಿದ ಪರಿಣಾಮ ಬಿಜೆಪಿ ಗೆದ್ದಿದೆ. ಅಲ್ಪಸಂಖ್ಯಾತರನ್ನು ದಾಳವಾಗಿ ಬಳಸಲು ಹೊರಟ ಸಿದ್ದು ಸೋಲು ಅನುಭವಿಸಿದ್ದಾರೆ.





















