ಭಾವಿ ಪತಿಯನ್ನೇ ಜೈಲಿಗೆ ಕಳುಹಿಸಿದ ಪೊಲೀಸ್ ಸಬ್ಇನ್‌ಸ್ಪೆಕ್ಟರ್

ಗುವಾಹಟಿ : ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಅನೇಕರಿಗೆ ವಂಚನೆ ಮಾಡಿದ್ದ ಕಿರಾತಕನೊಬ್ಬನನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಸ್ಸಾಂನ ನಾಗಾನ್‌ನ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರು ದಾಖಲಿಸಿದ ಎಫ್‌ಐಆರ್ ಅನುಗುಣವಾಗಿ ಅವರ ಭಾವಿ ಪತಿ ರಾಣಾ ಪೊಗಾಗ್ ಎಂಬಾತನನ್ನು ಬಂಧಿಸಲಾಗಿದೆ.
ತಾನು ಅಸ್ಸಾಂನಲ್ಲಿನ ಒಎನ್‌ಜಿಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪೊಗಾಗ್ ಸುಳ್ಳು ಹೇಳಿಕೊಂಡಿದ್ದ. ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಆತ ಜನರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ಸಬ್ಇನ್‌ಸ್ಪೆಕ್ಟರ್ ಆಗಿರುವ ಜುನ್ಮೋನಿ ರಭಾ ಅವರಿಗೆ ತಾನು ಒಎನ್‌ಜಿಸಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂದು ಆತ ಪರಿಚಯಿಸಿಕೊಂಡಿದ್ದ. ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಇಬ್ಬರ ನಿಶ್ಚಿತಾರ್ಥ ಕೂಡ ಮುಗಿದು ಹೋಗಿತ್ತು. ನವೆಂಬರ್‌ನಲ್ಲಿ ಇಬ್ಬರೂ ಮದುವೆಯಾಗಬೇಕಿತ್ತು.

ಆದರೆ ಮದುವೆಗೂ ಮುನ್ನವೇ ಪೊಗಾಗ್‌ನ ಕುತಂತ್ರ ಬುದ್ದಿ ಬಗ್ಗೆ ರಭಾ ಅವರಿಗೆ ಗೊತ್ತಾಗಿದೆ. ಕೂಡಲೇ ಅವರು ಎಫ್‌ಐಆರ್ ದಾಖಲಿಸಿದ್ದಾರೆ. “ನನ್ನ ಬಳಿ ಬಂದು, ರಾಣಾ ಪೊಗಾಗ್ ಎಂತಹ ದೊಡ್ಡ ವಂಚಕ ಎಂದು ಮಾಹಿತಿ ನೀಡಿದ ಮೂವರು ವ್ಯಕ್ತಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಅವರು ನನ್ನ ಕಣ್ಣು ತೆರೆಸಿದ್ದಾರೆ” ಎಂದು ರಭಾ ತಿಳಿಸಿದ್ದಾರೆ.

ಪೊಗಾಗ್ ಕುರಿತು ಬಂದ ಮಾಹಿತಿ ಆಧಾರದಲ್ಲಿ ಜುನ್ಮೋನಿ ಅವರು ಗೋಪ್ಯವಾಗಿ ತನಿಖೆ ಆರಂಭಿಸಿದ್ದರು. ಆತನ ಚೀಲವನ್ನು ಪರಿಶೀಲಿಸಿದಾಗ ಒಎನ್‌ಜಿಸಿಯ ನಕಲಿ ಸೀಲುಗಳು ಮತ್ತು ದಾಖಲೆಗಳು ಪತ್ತೆಯಾಗಿದ್ದವು. ಹೀಗಾಗಿ ಅವರು ಎಫ್‌ಐಆರ್ ದಾಖಲಿಸಿದ್ದರು. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.



































































































error: Content is protected !!
Scroll to Top