ಕಾರ್ಕಳ : ಮನುಷ್ಯ ಎಷ್ಟೇ ಶಕ್ತಿವಂತ, ಬುದ್ಧಿವಂತ, ಶ್ರೀಮಂತನಾಗಿದ್ದರೂ ಕೊರೊನಾ ಎಂಬ ಸಾಂಕ್ರಾಮಿಕದ ಎದುರು ತಲೆ ಬಾಗುವಂತಾಯಿತು. ಕೊರೊನಾ ಮಾಹಾಮಾರಿ ಸ್ವಾರ್ಥ ಬಿಟ್ಟು ಸರ್ವರ ಏಳಿಗೆಯನ್ನು ಬಯಸುವಂತೆ ಮಾಡಿತು. ಕೆಲವೊಂದು ಸಂದರ್ಭ ನಾವು ನಂಬುವ ದೈವ ದೇವರು ಕೂಡ ದೇವರ ರೂಪದಲ್ಲಿ ಬಂದು ಆರೋಗ್ಯ ಕಾಪಾಡುತ್ತಾನೆ. ಸಾಮೂಹಿಕವಾಗಿ ಪೂಜೆ ಮಾಡುವುದರಿಂದ ಊರಿನಲ್ಲಿ ಸುಭಿಕ್ಷೆ ನೆಲೆಗೊಳ್ಳುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಫೆ. 15ರಂದು ಬಜಗೋಳಿಯ ಸ. ಹಿ. ಪ್ರಾ. ಶಾಲಾ ಮೈದಾನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಾರು ನಲ್ಲೂರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ರಜತಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಾರ್ಕಳದಲ್ಲಿ 3120 ಸಂಘಗಳು, 86 ಒಕ್ಕೂಟಗಳಿವೆ. 24808 ಸದಸ್ಯರನ್ನು ಒಳಗೊಂಡಿದ್ದು, 47 ಕೋಟಿ ರೂ. ಉಳಿತಾಯ ಹೊಂದಿದೆ. ಶೇ. 100 ಸಾಲ ಮರುಪಾವತಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 36. 41 ಕೋಟಿ ರೂ. ಲಾಭಾಂಶ ವಿತರಿಸಲಾಗಿದೆ ಎಂದು ಡಾ. ಹೆಗ್ಗಡೆಯವರು ತಿಳಿಸಿದರು.
ಆಸ್ಪತ್ರೆಗಾಗಿ ಬೇಡಿಕೆ ಕುರಿತು ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆಯವರು ವೈದ್ಯರ ಮತ್ತು ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ನಡೆಸುವುದು ಕಷ್ಟಕರವಾಗಿದೆ. ಕಾರ್ಕಳದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಿಟಿ ಸ್ಕ್ಯಾನ್ ಉಪಕರಣ ಒದಗಿಸುವುದಾಗಿ ಹೇಳಿದರು.
ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಸಮಾಜದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದರು.
ಮುಡಾರು ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಮುನ್ನೆಲೆಗೆ ತಂದಿರುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಆಗಿದೆ. ಸರಕಾರದಿಂದ ಆಗದಂತಹ ಕಾರ್ಯ ಪೂಜ್ಯ ಖಾವಂದರ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದರು.
ನಲ್ಲೂರು ಮಾರುತಿ ಎಸ್ಟೇಟ್ ಮಾಲಕ ಹುರ್ಲಾಡಿ ರಘುವೀರ ಎ. ಶೆಟ್ಟಿ ಅಧ್ಯಕ್ಷತೆ ವಹಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಗಳೆಲ್ಲ ಸರ್ವ ರೀತಿಯಲ್ಲೂ ಅಭಿವೃದ್ಧಿಗೊಳ್ಳುವಂತಾಗಿದೆ. ಧಾರ್ಮಿಕ ಪ್ರಜ್ಞೆ ಮೂಡಿಸಿ ಊರಿನ ಎಲ್ಲರನ್ನೂ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಯೋಜನೆ ಪಾತ್ರ ಹಿರಿದಾದುದು ಎಂದರು.
ಆಕರ್ಷಕ ವೇದಿಕೆ – ಸಭಾಂಗಣ
ಸಭಾ ಕಾರ್ಯಕ್ರಮದ ವೇದಿಕೆ ಹಾಗೂ ಸಭಾಂಗಣ ಬಹಳ ಆಕರ್ಷಣೀಯವಾಗಿತ್ತು. ತೆಂಗಿನ ಗರಿಯ ತಟ್ಟಿಯಿಂದ ಮಾಡಿದ ಚಪ್ಪರ, ಪ್ರವೇಶ ದ್ವಾರ ಕಣ್ಮನ ಸೆಳೆಯುವಂತಿತ್ತು. ಸಭಾ ಕಾರ್ಯಕ್ರಮಕ್ಕೆ ಡಾ. ವೀರೇಂದ್ರ ಹೆಗ್ಗಡೆಯವರನ್ನು ತೆರೆದ ಜೀಪಿನಲ್ಲಿ ಬಜಗೋಳಿ ಪೇಟೆಯಿಂದ ಸಭಾಂಗಣಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.
ಬಜಗೋಳಿ ಆರೂರ್ಸ್ ಕ್ಲಿನಿಕ್ ನ ಡಾ. ವೆಂಕಟಗಿರಿ ರಾವ್, ನಲ್ಲೂರು ಆದೇಕಿ ದೈವಸ್ಥಾನದ ಆಡಳಿತ ಮೊಕ್ತೇಸರ ವಜ್ರನಾಭ ಚೌಟ, ಮುಡ್ರಾಲು ಮುಡಾರು ಶ್ರೀದೇವಿ ಕ್ಯಾಶ್ಯೂ ಮಾಲಕ ಗಣೇಶ್ ಕಾಮತ್, ಮುಡಾರು ಗೋಳಿದಡಿ ಸದಾಶಿವ ಸಾಲಿಯಾನ್, ಬಜಗೋಳಿ ಶ್ರೀ ಸಾಯಿ ಸಭಾಭವನದ ಮಾಲಕ ಹರೀಶ್ ಸಾಲ್ಯಾನ್, ನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಕವಿತಾ ಸಂತೋಷ್, ಬಜಗೋಳಿ ಸಾಯಿಕೃಪಾ ಜ್ಯುವೆಲ್ಲರ್ಸ್ ಮಾಲಕ ಪ್ರಸಾದ್ ಸಿ. ಆಚಾರ್ಯ, ಎಸ್.ಕೆ.ಡಿ.ಆರ್.ಡಿ.ಪಿ. ಅಧ್ಯಕ್ಷ ಪ್ರವೀಣ್ ಹೆಗ್ಡೆ, ಪೂಜಾ ಸಮಿತಿಯ ಗೌರವಾಧ್ಯಕ್ಷ ರಮಾನಂದ ಪೂಜಾರಿ ಉಪಸ್ಥಿತರಿದ್ದರು.
ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾವೀರ್ ಜೈನ್ ಸ್ವಾಗತಿಸಿ, ಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಯೋಜನಾಧಿಕಾರಿ ಭಾಸ್ಕರ್ ವಿ. ವಂದಿಸಿದರು.
