ಕಾರ್ಕಳ : ಮಕ್ಕಳು ಆಧುನಿಕ ತಂತ್ರಜ್ಞಾನ ದುರುಪಯೋಗಪಡಿಸದಂತೆ ಪೋಷಕರು ಗಮನಹರಿಸಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿಸಿ, ಪ್ರಜ್ಞಾವಂತ ನಾಗರಿಕರನ್ನಾಗಿ ಬೆಳೆಸಬೇಕೆಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.
ಅವರು ಫೆ. 12ರಂದು ಸಚ್ಚೇರಿಪೇಟೆಯ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಸೇವಾ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಚ್ಚೇರಿಪೇಟೆ ಘಟಕದ ಸಂಯೋಜನೆಯಲ್ಲಿ ನಡೆದ 18ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶಿಕ್ಷಕ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿ, ಧಾರ್ಮಿಕ ಪ್ರಜ್ಞೆಯಿದ್ದಲ್ಲಿ ಸಚ್ಚಾರಿತ್ರ, ಸದ್ಗುಣ, ಸದ್ವಿಚಾರ ಮೈಗೂಡುವುದು ಎಂದರು.
ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರು ದೇವಳದ ಅರ್ಚಕ ಹರಿಪ್ರಸಾದ್ ಭಟ್, ಉದ್ಯಮಿ ಬೋಜ ಸುವರ್ಣ ಸೂರತ್, ಪ್ರೈಮ್ ಟಿವಿ ನಿರ್ದೇಶಕ ರೂಪೇಶ್ ಕಲ್ಮಾಡಿ, ಮುಂಡ್ಕೂರು ದೊಡ್ಡಮನೆ ಭಾಸ್ಕರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಪೂಜಾರಿ, ಭಜರಂಗದಳ ಸಂಚಾಲಕ ವಿಶ್ವನಾಥ ಪೊಸ್ರಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರೀಶ ಸಚ್ಚೇರಿಪೇಟೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಸುಧೀರ್ ನಾಯಕ್ ಮತ್ತು ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.