Tuesday, December 7, 2021
spot_img
Homeಅಂಕಣಕಾನೂನು ಕಣಜ - ಮೋಟಾರು ವಾಹನಗಳ ನೋಂದಣಿ-ಚಾಲನೆ ಮತ್ತು ವಿಮೆ – ಕಾನೂನು ಮಾಹಿತಿ

ಕಾನೂನು ಕಣಜ – ಮೋಟಾರು ವಾಹನಗಳ ನೋಂದಣಿ-ಚಾಲನೆ ಮತ್ತು ವಿಮೆ – ಕಾನೂನು ಮಾಹಿತಿ

 1. ಮೋಟಾರು ವಾಹನಗಳ ಅಧಿನಿಯಮ 1988 ರ ಕಾಯ್ದೆ ಪ್ರಕಾರ ಮೋಟಾರು ವಾಹನದ ಮಾಲೀಕತ್ವ, ಚಾಲನೆ ಮತ್ತು ಉಪಯೋಗ ಇವುಗಳಿಗೆ ಸಂಬಂಧಿಸಿದಂತೆ ಅನೇಕ ನಿಯಂತ್ರಣಗಳನ್ನು ಮತ್ತು ನಿರ್ಬಂಧಗಳನ್ನು ವಿಧಿಸಲಾಗಿದೆ.
 2. ಅಧಿಕೃತ ಚಾಲನಾ ಲೈಸೆನ್ಸ್ ಹೊಂದದೆ ಇರುವ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮೋಟಾರು ವಾಹನವನ್ನು ಚಲಾಯಿಸಬಾರದು. ಚಾಲನಾ ಲೈಸೆನ್ಸ್ (ಡ್ರೈವಿಂಗ್ ಲೈಸೆನ್ಸ್) ಹೊಂದದೇ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಅಲ್ಲದೇ ಯಾವುದೇ ಮೋಟಾರು ವಾಹನದ ಮಾಲೀಕನು ಅಥವಾ ಮೋಟಾರು ವಾಹನವನ್ನು ತನ್ನ ಸುಪರ್ದಿನಲ್ಲಿಟ್ಟುಕೊಂಡ ವ್ಯಕ್ತಿಯು ಲೈಸೆನ್ಸ್ ಹೊಂದಿರದ ಯಾವುದೇ ವ್ಯಕ್ತಿಗೆ ಅದನ್ನು ಚಲಾಯಿಸುವುದಕ್ಕೆ ಅವಕಾಶ ಮಾಡಿಕೊಡಬಾರದು. ಹಾಗೆ ಮಾಡಿದ್ದಲ್ಲಿ ಅದು ಕೂಡ ಶಿಕ್ಷಾರ್ಹ ಅಪರಾಧವಾಗುವುದು ಮತ್ತು ಇದಕ್ಕೆ ವಾಹನದ ಮಾಲೀಕನು ಕೂಡಾ ಜವಾಬ್ದಾರನಾಗುತ್ತಾನೆ.

ವಾಹನಗಳ ಸಂಬಂಧವಾಗಿ ಒಟ್ಟು 7 ವಿಧದ ಲೈಸೆನ್ಸನ್ನು ಕೊಡಲಾಗುತ್ತದೆ ಅವು ಯಾವುದೆಂದರೆ:
ಎ) ಗೇರ್ ಇಲ್ಲದ ಮೋಟಾರ್ ಸೈಕಲ್
ಬಿ) ಗೇರ್ ಇರುವ ಮೋಟಾರ್ ಸೈಕಲ್
ಸಿ) ಅಶಕ್ತರ ವಾಹನ –‌ ಅಂದರೆ, ದೈಹಿಕ ಅಂಗವಿಕಲತೆ ಹೊಂದಿದ ವ್ಯಕ್ತಿಯೊಬ್ಬನ ಉಪಯೋಗಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಲ್ಪಟ್ಟ ಮೋಟಾರು ವಾಹನ.
ಡಿ) ಲಘು ಮೋಟಾರು ವಾಹನ – ಒಟ್ಟಾರೆ ತೂಕ 7,500 ಕೆ.ಜಿ.ಗಳಿಗೆ ಮೀರದ ಕಾರು, ಜೀಪು, ಟ್ರಾಕ್ಟರ್, ಆಮ್ನಿಬಸ್ ಮುಂತಾದವುಗಳು.
ಇ) ಸಾರಿಗೆ ವಾಹನ – ಅಂದರೆ, ಸಾರ್ವಜನಿಕ ಸೇವೆಗಾಗಿ ಇರುವ ವಾಹನ, ಸರಕು ಸಾಗಾಣಿಕೆಯ ವಾಹನ ಹಾಗೂ ಶೈಕ್ಷಣಿಕ ಸಂಸ್ಥೆಯ ಪ್ರಯಾಣಿಕರ ವಾಹನ ಮತ್ತು ಖಾಸಗಿ ಸೇವೆಗಾಗಿ ಇರುವ ವಾಹನ.
ಎಫ್) ರಸ್ತೆಯುರುಳು ವಾಹನ (ರೋಡ್ ರೋಲರ್)
ಜಿ) ನಿರ್ದಿಷ್ಟ ವರ್ಣನೆಯುಳ್ಳ ಯಾವುದೇ ವಿಧದ ಮೋಟಾರು ವಾಹನ
ಏಳು ವಿಧದ ವಾಹನಗಳ ಪೈಕಿ ಯಾವ ವಿಧದ ವಾಹನವನ್ನು ಚಲಾಯಿಸಲು ಅನುಮತಿ ನೀಡಲ್ಪಟ್ಟ ಲೈಸೆನ್ಸ್‍ನ್ನು, ಕೊಡಮಾಡಲಾಗಿರುತ್ತದೆಯೋ ಆ ವಿಧದ ವಾಹನವನ್ನು ಮಾತ್ರ ಚಾಲನೆ ಮಾಡತಕ್ಕದ್ದು.

 1. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಚಾಲಕನು ಪಾಲಿಸಬೇಕಾದ ಕರ್ತವ್ಯಗಳು ಯಾವುದೆಂದರೆ:

ಎ) ಸ್ಥಳದಿಂದ ಪರಾರಿಯಾಗದೇ ಗಾಯಾಳುವಿಗೆ ಕೂಡಲೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು.
ಬಿ) ಸಮೀಪದ ಪೋಲೀಸ್ ಠಾಣೆಗೆ ಅಪಘಾತದ ವಿವರ ತಿಳಿಸಬೇಕು.
ಸಿ) ವಾಹನದ ಮಾಲೀಕ ಅಥವಾ ವಿಮಾಕರ್ತನಿಗೂ ಅಪಘಾತದ ಬಗ್ಗೆ ಲಿಖಿತ ಮಾಹಿತಿ ಕೊಡಬೇಕು.
ಡಿ) ಅಪಘಾತದ ಸ್ಥಳದಲ್ಲಿ ನಿಲ್ಲಿಸಿರುವ ತನ್ನ ವಾಹನದಿಂದಾಗಿ ಪುನಃ ಸಂಭವಿಸಬಹುದಾದ ಡಿಕ್ಕಿ ಮತ್ತು ಬೆಂಕಿ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.

 1. ಪ್ರತಿಯೊಂದು ಮೋಟಾರು ವಾಹನದ ಮಾಲೀಕನು ತನ್ನ ವಾಹನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸತಕ್ಕದ್ದು.
  ಪ್ರತಿಯೊಂದು ಮೋಟಾರು ವಾಹನವನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದ್ದು ನೋಂದಾಯಿಸದ ಯಾವುದೇ ಮೋಟಾರು ವಾಹನವನ್ನು ಚಲಾಯಿಸುವುದು ಅಥವಾ ಚಲಾಯಿಸಲು ಅದರ ಮಾಲೀಕನು ಯಾರಿಗಾದರೂ ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
  ಮಾಲೀಕನ ವಾಸಸ್ಥಳ ಅಥವಾ ವ್ಯವಹಾರ ಸ್ಥಳದ ಬದಲಾವಣೆಯಾದಲ್ಲಿ ಆತನು ಆ ಬಗ್ಗೆ ಮಾಹಿತಿಯನ್ನು ಹೊಸ ಸ್ಥಳದ ಮೇಲೆ ಅಧಿಕಾರವ್ಯಾಪ್ತಿ ಇರುವ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಹೀಗೆ ಮಾಹಿತಿ ಸಲ್ಲಿಸದಿರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
  ಮಾಲೀಕನು ವಾಹನವನ್ನು ಮತ್ತೊಬ್ಬರಿಗೆ ವರ್ಗಾಯಿಸಿದಾಗ ಆ ವರ್ಗಾವಣೆಯ ಸಂಗತಿಯನ್ನು ವಾಹನ ನೋಂದಣಿ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು.
  ಮಾಲೀಕನು ಮೃತಪಟ್ಟಾಗ ಆತನ ವಾರಸುದಾರನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ವಾಹನವನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕು.
 2. ಪ್ರತಿಯೊಂದು ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ವಿಮಾ ಪ್ರಮಾಣ ಪತ್ರ ನಿರಂತರವಾಗಿ ಚಾಲ್ತಿಯಲ್ಲಿರತಕ್ಕದ್ದು.
  ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ವಿಮಾ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ವಿಮಾ ಪ್ರಮಾಣ ಪತ್ರ ಚಾಲ್ತಿಯಲ್ಲಿರದ ಯಾವುದೇ ವಾಹನವನ್ನು ಚಾಲನೆ ಮಾಡುವುದು ಮತ್ತು ಅದನ್ನು ಮತ್ತೊಬ್ಬರು ಚಾಲನೆ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಶಿಕ್ಷಾರ್ಹ ಅಪರಾಧ, ಅಲ್ಲದೆ ಸೂಕ್ತ ಮೋಟಾರು ವಾಹನ ವಿಮಾ ಪ್ರಮಾಣ ಪತ್ರ ಮತ್ತು ನೋಂದಣಿ ಪತ್ರ ಹೊಂದಿರದ ವಾಹನದಿಂದಾಗಿ ಅಪಘಾತವು ಸಂಭವಿಸಿದ್ದಲ್ಲಿ, ಮತ್ತು ಅಪಘಾತದಿಂದಾಗಿ- ಯಾವುದೇ ವ್ಯಕ್ತಿ ಗಾಯಗೊಂಡರೆ ಗಾಯಾಳುವಿಗೆ ಅಥವಾ ಮೃತ ಪಟ್ಟ ವ್ಯಕ್ತಿ ಅಥವಾ ಆತನ ವಾರೀಸುದಾರರಿಗೆ ಅಥವಾ ಯಾವುದೇ ವ್ಯಕ್ತಿಯ ಆಸ್ತಿಪಾಸ್ತಿಗೆ ಹಾನಿಯುಂಟಾದಲ್ಲಿ ನಷ್ಟ ಪರಿಹಾರವನ್ನು ಕೊಡುವ ಜವಾಬ್ದಾರಿಯಿಂದ ಸಂಬಂಧಪಟ್ಟ ವಿಮಾ ಕಂಪೆನಿ (ಇನ್ಸೂರೆನ್ಸ್ ಕಂಪೆನಿ) ತಪ್ಪಿಸಿಕೊಳ್ಳಬಹುದು ಮತ್ತು ನಷ್ಟ ಪರಿಹಾರವನ್ನು ಕೊಡುವ ಜವಾಬ್ದಾರಿ ವಾಹನದ ಮಾಲೀಕ ಮತ್ತು ಚಾಲಕ ಇವರಿಬ್ಬರ ಮೇಲಿರುತ್ತದೆ. ಆದುದರಿಂದ ಪ್ರತಿಯೊಂದು ವಾಹನಕ್ಕೆ ಸಂಬಂಧಿಸಿದಂತೆ ಸೂಕ್ತ ನೋಂದಣಿ ಪ್ರಮಾಣ ಪತ್ರ, ವಿಮಾ ಪ್ರಮಾಣ ಪತ್ರ ಯಾವಾಗಲೂ ಚಾಲ್ತಿಯಲ್ಲಿರುವಂತೆ ಮತ್ತು ವಾಹನವನ್ನು ಚಲಾಯಿಸುವ ಸಂದರ್ಭದಲ್ಲಿ ಆ ವ್ಯಕ್ತಿ ಸೂಕ್ತ ಚಾಲನಾ ಲೈಸೆನ್ಸ್ ಹೊಂದಿರುವಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಪ್ರತಿಯೊಬ್ಬ ವಾಹನ ಮಾಲೀಕನ ಮೇಲಿರುತ್ತದೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!