ಆರೋಗ್ಯಧಾರ – ಆರೋಗ್ಯವನ್ನು ಕಾಪಾಡುವ ತ್ರಿಫಲಾಚೂರ್ಣ

ತ್ರಿಫಲಾ ಪದದಲ್ಲಿ ಎರಡು ಪದಗಳು ಇವೆ. ತ್ರಿ ಮತ್ತು ಫಲ ಅಂದರೆ ಮೂರು ಫಲಗಳು ಎಂದರ್ಥ. ನಮ್ಮ ಆರೋಗ್ಯವನ್ನು ಕಾಪಾಡಲು ಸರ್ವ ಶ್ರೇಷ್ಠ ಔಷಧವೆನ್ನಬಹುದು. ತ್ರಿಫಲಗಳು ಯಾವುದು ಎಂದರೆ ಹರೀತಕಿ (ಅಳಲೆಕಾಯಿ) ಬಿಭಿರಕಿ (ತಾರೆಕಾಯಿ) ಮತ್ತು ಆಮಲಕಿ (ನೆಲ್ಲಿಕಾಯಿ). ಬೇರೆ ಬೇರೆ ಸಂಹಿತೆಗಳಲ್ಲಿ ಇದರ ಪ್ರಮಾಣ ಬೇರೆ ಬೇರೆ ಉಲ್ಲೇಖವಿದೆ. ಮೂರು ಕಾಯಿಗಳನ್ನು ಸಮಪ್ರಮಾಣದಲ್ಲಿ ಬಳಸಿ ಮಾಡಿರುವಂತಹ ತ್ರಿಫಲ ಚೂರ್ಣದ ಬಗ್ಗೆ ತಿಳಿದುಕೊಳ್ಳೋಣ.

ತ್ರಿಫಲಾಚೂರ್ಣ ಮಾಡುವ ಬಗೆ
ಕಾಯಿಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಅದರ ಬೀಜವನ್ನು ಬಿಸಾಡಿ ಒಣಗಿಸಿ ಚೂರ್ಣವನ್ನು ಮಾಡಬಹುದು. ಇದನ್ನು ದಿನನಿತ್ಯ ಬಳಸಿದರೆ ಆರೋಗ್ಯಕ್ಕೆ ಹಿತಕರ ಅನೇಕ ರೋಗಗಳನ್ನು ತಡೆಯಬಹುದು.

ದೋಷದ ಮೇಲೆ ಪರಿಣಾಮ
ತ್ರಿಫಲಾಚೂರ್ಣ ಕಫ ಹಾಗೂ ಪಿತ್ತದೋಷವನ್ನು ಶಮನಗೊಳಿಸುತ್ತದೆ ಆದ್ದರಿಂದ ಕಫ ಪಿತ್ತ ರೋಗಗಳಲ್ಲಿ ಇದರ ಉಪಯೋಗ ಹೆಚ್ಚು. ವಾತಾನುಲೋಮನ ಮಾಡುತ್ತದೆ ಅಂದರೆ ನಮ್ಮ ದೇಹದಿಂದ ವಾಯುವನ್ನು ಹೊರಗೆ ಹಾಕುತ್ತದೆ.
ಸಪ್ತ ಧಾತುಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
ಮಲವನ್ನು ಸುಲಭವಾಗಿ ಹೊರಗೆ ಹಾಕುತ್ತದೆ.

ರೋಗಗಳಲ್ಲಿ ಉಪಯೋಗಗಳು
ನೇತ್ರ ರೋಗಗಳಲ್ಲಿ ಸರ್ವಶ್ರೇಷ್ಠ ಔಷಧವೆನಿಸಿದೆ. ತ್ರಿಫಲ ಚೂರ್ಣವನ್ನು ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಕುದಿಸಿ ಸೋಸಿ ತಣಿದ ನಂತರ ಈ ನೀರಿನಿಂದ ಕಣ್ಣನ್ನು ತೊಳೆಯಬಹುದು ಅಥವಾ ರಾತ್ರಿ ಅರ್ಧ ಚಮಚ ಚೂರ್ಣವನ್ನು ಒಂದು ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ತುಪ್ಪದ ಜೊತೆ ಬೆರೆಸಿ ಮಲಗುವ ಮುಂಚೆ ಸೇವಿಸಬಹುದು.
ಪ್ರಮೇಹ ಅಥವಾ ಸಕ್ಕರೆ ಕಾಯಿಲೆಗಳಿಂದ ಬಳಲುವವರಿಗೆ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಸಕ್ಕರೆ ಕಾಯಿಲೆ ಹಾಗೂ ಬೊಜ್ಜುತನ ಇರುವವರು ಅರ್ಧ ಚಮಚ ಚೂರ್ಣವನ್ನು ಬಿಸಿ ನೀರಿನ ಜೊತೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಹಿತಕರ.
ತ್ವಚೆಯ ರೋಗಗಳಲ್ಲಿ ತುರಿಕೆ ಇದ್ದಾಗ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಇದರ ಲೇಪನ ಮಾಡಬಹುದು. ಇದರಿಂದ ಅಧಿಕ ಬೆವರುವಿಕೆ ಕೂಡ ಕಡಿಮೆಗೊಳ್ಳುತ್ತದೆ. ಎರಡು ಲೋಟ ನೀರಿಗೆ ಎರಡು ಚಮಚ ಚೂರ್ಣ ಹಾಕಿ ಅರ್ಧ ಲೋಟ ಬರುವವರೆಗೆ ಕುದಿಸಿ ಸೋಸಿರಿ. ಈ ನೀರನ್ನು ತ್ವಚೆಯ ರೋಗಗಳಲ್ಲಿ ತ್ವಚೆಯನ್ನು ತೊಳೆಯಲು ಬಳಸಬಹುದು.
ಬೊಜ್ಜನ್ನು ಕಡಿಮೆಗೊಳಿಸಿ ಬೊಜ್ಜು ಬೆಳೆಯದ ಹಾಗೆ ಮಾಡುತ್ತದೆ. ಇದಕ್ಕೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಚಮಚ ಚೂರ್ಣದ ಜೊತೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಸೇವಿಸಿದ ನಂತರ ಮೂರು ಗಂಟೆಗಳ ಕಾಲ ಏನನ್ನೂ ಸೇವಿಸಕೂಡದು.
ದೇಹದಲ್ಲಿ ಉರಿ ಇದ್ದಾಗ ಇದರ ಉಪಯೋಗ ಹಿತಕರ. ಊಟವಾದ ಬಳಿಕ ಅರ್ಧ ಚಮಚ ಚೂರ್ಣವನ್ನು ಜೇನು ತುಪ್ಪದ ಜೊತೆ ಸೇವಿಸಿದರೆ ದೇಹದಲ್ಲಿರುವ ಉರಿ ಶಮನಗೊಳ್ಳುತ್ತದೆ.
ಆ್ಯಸಿಡಿಟಿಗೆ ಊಟವಾದ ನಂತರ ಅರ್ಧ ಚಮಚ ಚೂರ್ಣದ ಜೊತೆ ಜೇನುತುಪ್ಪ ಬೆರೆಸಿ ಸೇವಿಸಿರಿ.
ಮಲಬದ್ಧತೆ, ಅಜೀರ್ಣ, ಬಿಳಿಕೂದಲು, ಯಕೃತ್ ಸಂಬಂಧಿ ಸಮಸ್ಯೆ, ಪೈಲ್ಸ್ ಗಳಲ್ಲಿ ರಾತ್ರಿ ಕಾಲು ಚಮಚ ಚಮಚ ಚೂರ್ಣ ಬಿಸಿ ನೀರಿನ ಜೊತೆ ಸೇವಿಸಿರಿ.
ಪಿತ್ತ ರೋಗಗಳಲ್ಲಿ ತುಪ್ಪದ ಜೊತೆ ಸೇವಿಸಿ, ಕಫ ರೋಗಗಳಲ್ಲಿ ಜೇನುತುಪ್ಪದ ಜೊತೆ ಸೇವಿಸಿ. ಬಿಸಿ ನೀರಿನ ಜೊತೆ ಕೂಡ ಸೇವಿಸಬಹುದು.
ವಸಡಿನ ಸಮಸ್ಯೆಗಳಲ್ಲಿ ಅಥವಾ ಬಾಯಿಹುಣ್ಣುಗಳಲ್ಲಿ ತ್ರಿಫಲಾ ಚೂರ್ಣದ ನೀರಿನಿಂದ ಬಾಯಿ ಮುಕ್ಕಳಿಸಬಹುದು ಅಥವಾ ಚೂರ್ಣವನ್ನು ಬಾಯಿಹುಣ್ಣಾಗಿರುವ ಜಾಗಕ್ಕೆ ಹಚ್ಚಿ ನಂತರ ಬಾಯ್ಮುಕ್ಕಳಿಸಿ.
ಕೂದಲಿನ ಸಮಸ್ಯೆಗಳಿಗೆ ಚೂರ್ಣವನ್ನು ನೀರಿನ ಜೊತೆ ಬೆರೆಸಿ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಡಬೇಕು ನಂತರ ಸ್ನಾನ ಮಾಡುವುದರಿಂದ ಬಿಳಿ ಕೂದಲು ಕೂದಲು ಉದುರುವಿಕೆಯನ್ನು ತಡೆಯಬಹುದು.

ಸೇವಿಸುವ ಸಮಯ
ಕಫ ಪಿತ್ತ ರೋಗಗಳಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಕಣ್ಣಿನ ಸಮಸ್ಯೆಗಳಲ್ಲಿ ರಾತ್ರಿಯ ಸಮಯ ಸೇವಿಸುವುದು ಒಳ್ಳೆಯದು.

ಯಾರು ಬಳಸಬಾರದು
ವಾತರೋಗಗಳಲ್ಲಿ, ಕೃಶ ದೇಹ, ಶುಷ್ಕ ದೇಹ, ಗರ್ಭಿಣಿಯರು, ದುರ್ಬಲರು, ಗಟ್ಟಿಯಾದ ಮಲ ವಿಸರ್ಜನೆ ಮಾಡುವವರು ಬಳಸಬಾರದು.

ಹೆಚ್ಚೆಂದರೆ ಮೂರು ತಿಂಗಳವರೆಗೆ ಬಳಸಬಹುದು.
ತ್ರಿಪಲಾವನ್ನು ಬಳಸಿ ಆರೋಗ್ಯವನ್ನು ಕಾಪಾಡಿ.
(ತ್ರಿಫಲಾ ಚೂರ್ಣವನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ )

ಡಾ. ಹರ್ಷಾ ಕಾಮತ್

















































































error: Content is protected !!
Scroll to Top