ಕಾರ್ಕಳ : ಕಾರ್ಕಳ ಪೇಟೆಯ ಸರ್ವಜ್ಞ ವೃತ್ತದ ಬಳಿ ಅಳವಡಿಸಿರುವ ಹೈಮಾಸ್ಟ್ ದೀಪ ಕಳೆದ ಒಂದು ತಿಂಗಳಿನಿಂದ ಉರಿಯುತ್ತಿಲ್ಲ. ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ 1. 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಹೈಮಾಸ್ಟ್ ದೀಪ ಇದೀಗ ಉಪಯೋಗಕ್ಕಿಲ್ಲದಂತಾಗಿದೆ. ಕಂಬದಲ್ಲಿರುವ 4 ಹೈ ಮಾಸ್ಟ್ ದೀಪಗಳ ಪೈಕಿ ಒಂದು ದೀಪ ಮಾತ್ರ ಬೆಳಕು ನೀಡುತ್ತಿದೆ.
ನಿರ್ವಹಣೆ ಹೊಣೆ ಗ್ರಾ.ಪಂ. ಗೆ
ಹೈ ಮಾಸ್ಟ್ ದೀಪದ ನಿರ್ವಹಣೆ ಹೊಣೆ ಹೊತ್ತಿರುವ ಕುಕ್ಕುಂದೂರು ಗ್ರಾ.ಪಂ. ಹೈಮಾಸ್ಟ್ ಲೈಟ್ ಸರಿಪಡಿಸುವತ್ತ ಗಮನ ಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಗ್ರಾ.ಪಂ.ಗೆ ತಿಳಿಸಿದ್ದಾಗ್ಯೂ ಅಧಿಕಾರಿಗಳು ಮೌನವಹಿಸಿದ್ದಾರೆ. ಕುಕ್ಕುಂದೂರು ಪಂಚಾಯತ್ನ ಅನತಿ ದೂರದಲ್ಲಿರುವ ಮತ್ತು ಪೇಟೆಗೆ ಹೊಂದಿಕೊಂಡಂತಿರುವ ಸರ್ವಜ್ಞ ವೃತ್ತದಲ್ಲಿನ ದೀಪವನ್ನು ಸರಿಪಡಿಸದಿರುವಾಗ ಇನ್ನು ಗ್ರಾಮೀಣ ಪ್ರದೇಶದ ಲೈಟ್ ಸ್ಥಿತಿ ಹೇಗಿರಬಹುದು ? ನಾಲ್ಕು ದಿನ ಉರಿಯುವಂತಹ ಹೈಮಾಸ್ಟ್ ದೀಪವನ್ನು ಸಿಕ್ಕ ಸಿಕ್ಕಲ್ಲಿ ಅಳವಡಿಸಿ ಸಾರ್ವಜನಿಕ ಹಣ ಪೋಲು ಮಾಡುವುದಾದರೂ ಯಾಕೆ ? ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಹೈ ಮಾಸ್ಟ್ ದೀಪ ಕೆಟ್ಟು ಹೋದಲ್ಲಿ ಸರಿಪಡಿಸುವ ಕಾರ್ಯವಾಗುತ್ತಿಲ್ಲ. ಸೋಲಾರ್ ದೀಪದ ಕಥೆಯೂ ಇಂಥದ್ದೇ. ಸರ್ವಜ್ಞ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸುವುದು ಅಗತ್ಯವಾಗಿತ್ತು. ಆದರೆ, ಇದೀಗ ಅದರ ನಿರ್ವಹಣೆ ಇಲ್ಲದೇ ಪ್ರಯೋಜನಕ್ಕಿಲ್ಲದಂತಾಗಿದೆ.
ರಾಜೇಶ್ ರಾವ್
ಮಾಜಿ ಅಧ್ಯಕ್ಷರು, ಕುಕ್ಕುಂದೂರು ಗ್ರಾ.ಪಂ.































































