ಸಾಹಿತ್ಯ ಲೋಕದ ದಿಗ್ಗಜ ಅಂಬಾತನಯ ಮುದ್ರಾಡಿ

ಸಾಹಿತಿ, ಕವಿ, ಹರಿದಾಸ, ಜಿನದಾಸ, ಶಿಕ್ಷಕ, ಯಕ್ಷಗಾನ ಕಲಾವಿದ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿ,ವಚನಕಾರ, ಅಂಕಣಕಾರ, ನಾಟಕಕಾರ, ವಾಗ್ಮಿ, ಹೀಗೆ ಬಹು ಮುಖಿ ಪ್ರತಿಭಾವಂತ, ಚಿಂತಕ ಶ್ರೀ ಅಂಬಾತನಯ ಮುದ್ರಾಡಿಯವರು ಸಜ್ಜನಿಕೆಗೆ ಹೆಸರಾದವರು. 36 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬಾಲ್ಯದಲ್ಲಿ ಗುರು ಮುದ್ರಾಡಿಯ ಮರಿಯಪ್ಪ ಕಲ್ಕೂರ ಅವರನ್ನು ಶಿಕ್ಷಣದ ಕಡೆಗೆ ಸೆಳೆದರೆ, ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು ಸಾಹಿತ್ಯದ ಕಡೆಗೆ ಅವರನ್ನು ಪ್ರೇರೇಪಿಸಿದರು. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕರ್ಣನ ಕುರಿತು ಅವರು ರಚಿಸಿದ ನಾಟಕ ‘ಪರಿತ್ಯಕ್ತ’ ಮಂಗಳೂರು ವಿಶ್ವವಿದ್ಯಾನಿಲಯದ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಪಠ್ಯ ಪುಸ್ತಕವಾಗಿತ್ತು. ಅವರ ವಿಹಾರ ವಾಟಿಕೆ 1960ರಲ್ಲಿ ಪ್ರಕಟಿತವಾದ ಮೊದಲ ಕೃತಿ. ಇದು ಚತುರ್ದಶ ಪದಗಳ (ಸಾನೆಟ್) ಕೃತಿ. ಬಳಿಕ 30 ಪ್ರಕಟಿತ ಕೃತಿಗಳ ರಚನೆಕಾರರಾದ ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿ ರಚನೆ ಮಾಡಿದ್ದಾರೆ. ಅವರು ಇತ್ತೀಚೆಗೆ ಕಿನ್ನರ ಕಿನ್ನರಿ ಎಂಬ ಪ್ರೇಮ ಕವನಗಳ ಸಂಕಲನವನ್ನು, ಹಾಗೂ ರಾಮಾಯಣದ ಪಾತ್ರಗಳ ಕುರಿತ ರೂಪಕ ರಾಮದರ್ಶನಂ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆಗಳನ್ನು ಗೌರವಿಸಿ ಅವರಿಗೆ 75ರ ಅಭಿನಂದನೆಯೊಡನೆ ಮುಂಬಯಿಯಲ್ಲಿ ಸುಮನಸ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಯಿತು. ಖ್ಯಾತ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟರು ಅಂಬಾತನಯ ಮುದ್ರಾಡಿಯವರ ಕುರಿತು ‘ಸ್ವಯಂ ಸಾಧನೆಯ ಸಾಹಿತಿ ಅಂಬಾತನಯ ಮುದ್ರಾಡಿ’ ಎಂಬ ಕೃತಿಯನ್ನು ಬರೆದಿದ್ದಾರೆ. ‘ಅಂಬಾತನಯ ಮುದ್ರಾಡಿಯವರ ಸಾಹಿತ್ಯ ಕೃತಿಗಳು ಒಂದು ಅಧ್ಯಯನ ‘ ಎಂಬ ವಿಷಯದ ಕುರಿತು ಎಂ.ಫಿಲ್ ಪ್ರಬಂಧವನ್ನು ಮಿತ್ರಪ್ರಭ ಹೆಗ್ಡೆ ಬರೆದಿದ್ದಾರೆ. ಇತ್ತೀಚೆಗೆ ಯಕ್ಷಗಾನ ರಂಗದ ಅವರ ಕೊಡುಗೆಗಾಗಿ ಪಾರ್ತಿಸುಬ್ಬ ಪ್ರಶಸ್ತಿ ಲಭಿಸಿದೆ. ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ಯಾದವರಾವ್ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಮಟ್ಟಿ ಗೋವರ್ಧನ ರಾವ್‌ ಪ್ರಶಸ್ತಿ, ಕುಕ್ಕಿಲ ಕೃಷ್ಣಭಟ್ಟ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಫಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಮುಂಬಯಿ ಪದವೀಧರ ಯಕ್ಷಗಾನ ಸುವರ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
ಕುಳಿತಲ್ಲಿ ಕವನ ಕಟ್ಟುವ ಕಲೆ ಸಿದ್ದಿಸಿರುವ ಇವರ ಹರಿಕಥೆಗಳಲ್ಲಿ ಇಂತಹ ಆಶುಕವನಗಳು ಹೇರಳವಾಗಿ ರಚಿತವಾಗಿದೆ. ಇವರ ನಿಜ ನಾಮಧೇಯ ಕೇಶವ ಶೆಟ್ಟಿಗಾರ. ದೇವಿಯ ಭಕ್ತರಾದ ಇವರು ಅಂಬಾತನಯ ಎಂಬುದಾಗಿ ತಮ್ಮ ಕಾವ್ಯ ನಾಮದಿಂದಲೇ ಪರಿಚಿತರು. ಕಿರಿಯರನ್ನು ಪ್ರೋತ್ಸಾಹಿಸುವ ಈ ಹಿರಿಯರು ಸಜ್ಜನಿಕೆಗೆ ಹೆಸರಾದವರು. ಅವರು ಅಜಾತಶತ್ರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿರುವ ಅವರು ಇನ್ನೂರಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.
ಕಿರಿಯರನ್ನು ಪ್ರೋತ್ಸಾಹಿಸುವ ಈ ಹಿರಿಯರು ಸಜ್ಜನಿಕೆಗೆ ಹೆಸರಾದವರು. ಅವರು ಅಜಾತಶತ್ರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.

ಮಿತ್ರಪ್ರಭಾ ಹೆಗ್ಡೆ








































































































error: Content is protected !!
Scroll to Top