ಬೆಳಗಾವಿ: ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಬಾಲಕರು ದುರ್ಮರಣ.


ಬೆಳಗಾವಿ: ಜಮೀನಿನಲ್ಲಿ ಆಟವಾಡುತ್ತಾ ಏಡಿ ಹಿಡಿಯುವುದಕ್ಕೆಂದು ತೆರಳಿದ್ದ ಮೂವರು ಬಾಲಕರು ಬಾವಿಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ಓರ್ವ ಬಾಲಕ ಅಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಎಂಬಲ್ಲಿ ನಡೆದಿದೆ.

ಮೃತರನ್ನು ಮಹಾರಾಷ್ಟ್ರದ ಚಂದಗಡ್ ಗ್ರಾಮದ ನಿವಾಸಿ ಲೋಕೇಶ ಪಾಟೀಲ್ (10) ಹಾಗೂ ಬೆಕ್ಕಿನಕೇರಿ ಗ್ರಾಮದ ನಿಖಿಲ್ ಬೊಂದ್ರೆ (7) ಎಂದು ಗುರುತಿಸಲಾಗಿದೆ.

ಲೋಕೇಶ ಕೊರೋನಾದಿಂದಾಗಿ ಶಾಲೆ ರಜೆ ಇದ್ದ ಕಾರಣ ಹಲವು ದಿನಗಳ ಹಿಂದೆ ಬೆಕ್ಕಿನಕೇರಿಯಲ್ಲಿನ ತನ್ನ ಸಂಬಂಧಿಗಳ ಮನೆಗೆ ಬಂದಿದ್ದ. ನಿನ್ನೆ ಬೆಳಿಗ್ಗೆ ಮೂವರು ಬಾಲಕರು ಗ್ರಾಮದ ಹೊರವಲಯದಲ್ಲಿರುವ ಜಮೀನಿಗೆ ತೆರಳಿದ್ದಾರೆ. ಆಗ ಅಲ್ಲಿದ್ದ ಬಾವಿಯಲ್ಲಿ ಏಡಿಗಳನ್ನು ಹಿಡಿಯಲು ಮುಂದಾಗಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ಆ ಘಟನೆಯಲ್ಲಿ ಈಜು ಬಾರದ ಇಬ್ಬರು ಬಾಲಕರು ಮೃತಪಟ್ಟರೆ ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬದುಕಿ ಬಂದ ಬಾಲಕ ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದಾನೆ. ಆದರೆ ಪೋಷಕರು ಸ್ಥಳಕ್ಕೆ ಬರುವ ಮುನ್ನ ಇಬ್ಬರ ಪ್ರಾಣ ಹಾರಿ ಹೋಗಿತ್ತು.

ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.









































































































error: Content is protected !!
Scroll to Top