ಕಾರ್ಕಳ, ನ.30: ಕಾರ್ಕಳ ಕೋರ್ಟ್ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಲೋಕೋಪಯೋಗಿ ಇಲಾಖಾ ಮೂಲಗಳಿಂದ ತಿಳಿದುಬಂದಿದೆ. 15 ಕೋಟಿ ರೂ. ವೆಚ್ಚದಲ್ಲಿ 3350 ಚದರ ಮೀಟರ್ ವಿಸ್ತಾರದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಕೋರ್ಟ್ ಕಟ್ಟಡ ತಲೆಎತ್ತಿ ನಿಂತಿದೆ. ನೂತನ ಕಟ್ಟಡದಲ್ಲಿ ಸಿವಿಲ್ ಜಡ್ಜ್ ಜೂನಿಯರ್ ಡಿವಿಜನ್, ಜೆಎಂಎಫ್‌ಸಿ ಸೀನಿಯರ್ ಸಿವಿಲ್ ಜಡ್ಜ್, ಎಸಿಜೆಎಂ ನ್ಯಾಯಾಲಯ, ಭದ್ರತಾ ಕೊಠಡಿ, ಸಹಾಯಕ ಸರಕಾರಿ ಅಭಿಯೋಜಕರ ಕಚೇರಿ, ಕಾರಾಗೃಹವಿದೆ. ವಾಹನ ನಿಲುಗಡೆಗೆ ವಿಸ್ತಾರವಾದ ಜಾಗ, ಹೂದೋಟ, ವಿಶ್ರಾಂತಿ ಕೊಠಡಿಯೂ ಆಗಿದೆ.
ಕೆಡವಲಾಯಿತು ಹಳೆ ಕಟ್ಟಡ
1889ರ ವೇಳೆಯಲ್ಲಿ ನಿರ್ಮಾಣವಾದ ಕಟ್ಟಡವನ್ನು ಕೆಡವಿ, ಅದೇ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣವಾಗೊಂಡಿದೆ. ಹಳೆ ಕಟ್ಟಡ ಸುಸ್ಥಿತಿಯಲ್ಲಿದ್ದ ಮತ್ತು ಬಹಳ ಆಕರ್ಷಕವಾಗಿದ್ದ ಕಾರಣ ಹೊಸ ಕಟ್ಟಡದ ಅಗತ್ಯವಿಲ್ಲ. ಇರುವ ಕಟ್ಟಡವನ್ನೇ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ದಿಪಡಿಸಬೇಕೆನ್ನವ ಮಾತುಗಳು ಅಂದು ಕೇಳಿಬಂದಿತ್ತು. 2.41 ಎಕ್ರೆ ಜಾಗವು ಕೋರ್ಟ್‍ನ ಸ್ವಾಧೀನದಲ್ಲಿದೆ.
ಬೆಳುವಾಯಿ ಅಬ್ದುಲ್ ನಝೀರ್ ಮುತುವರ್ಜಿ
ನೂತನ ಕಟ್ಟಡ ನಿರ್ಮಾಣವಾಗುವಲ್ಲಿ ಸುಪ್ರೀಂ ಕೋರ್ಟ್ ನ್ಯಾಯೂಮೂರ್ತಿ ಮೂಡಬಿದ್ರಿ ತಾಲೂಕಿನ ಬೆಳ್ವಾಯಿ ಅಬ್ದುಲ್ ನಝೀರ್ (ಕಾರ್ಕಳ ನ್ಯಾಯಾಲಯದಲ್ಲಿ ವಕೀಲರಾಗಿದ್ದವರು) ಅವರ ಮುತುವರ್ಜಿ ಬಹಳಷ್ಟಿದೆ. ಅನುದಾನದ ಒಟ್ಟು ಮೊತ್ತದಲ್ಲಿ ರಾಜ್ಯ ಸರಕಾರ ಶೇ. 60 ಹಾಗೂ ಕೇಂದ್ರ ಸರಕಾರ ಶೇ. 40ನ್ನು ಭರಿಸಿದೆ. ಕಟ್ಟಡ ಕಾಮಗಾರಿ ಗುತ್ತಿಗೆಯನ್ನು ಎಸ್‌ಕೆಎಸ್ ಕನ್ಸ್‌ಸ್ಟ್ರಕ್ಷನ್‌ನ ಸುಜಯ್ ಶೆಟ್ಟಿಯವರು ಪಡೆದಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯೊಳಗಡೆಯೇ ಪೂರ್ಣಗೊಳಿಸಿದ್ದಾರೆ. ಅವಧಿ ಎರಡು ವರ್ಷವಿದ್ದಾಗ್ಯೂ ಒಂದೂವರೆ ವರ್ಷದಲ್ಲೇ ಕಾಮಗಾರಿ ಮುಗಿಸಿರುತ್ತಾರೆ.
ಸ್ಥಳಾಂತರ
ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣವಾದ ಹಿನ್ನೆಲೆಯಲ್ಲಿ 2019ರ ಎಪ್ರಿಲ್‌ನಲ್ಲಿ ಕೋರ್ಟ್ ಅನ್ನು ಪೊಲೀಸ್ ಠಾಣೆ ಬಳಿಯಲ್ಲಿರುವ ನ್ಯಾಯಾಧೀಶರ ವಸತಿ ಗೃಹಕ್ಕೆ ಸ್ಥಳಾಂತರಗೊಳಿಸಲಾಗಿತ್ತು.

ಉನ್ನತ ಸ್ಥಾನ ಅಲಂಕರಿಸಿದವರು
ಕಾರ್ಕಳ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ಉನ್ನತ ಸ್ಥಾನಕ್ಕೇರಿದವರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ.ಎಸ್. ಹೆಗ್ಡೆ, ಸಂತೋಷ್ ಹೆಗ್ಡೆ, ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಬೆಳುವಾಯಿ ಅಬ್ದುಲ್ ನಝೀರ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಜಿಲ್ಲಾ ನ್ಯಾಯಾಧೀಶರಾಗಿರುವ ಮಂಜುನಾಥ ನಾಯಕ್, ಲತಾ ಕೆ., ಕೆ.ಪಿ. ದಿನೇಶ್, ರೋಡಲ್ಪೋ ಪಿರೇರಾ, ಪದ್ಮಪ್ರಸಾದ್ ಜೆ.ಕೆ., ಪ್ರಕಾಶ್ ನಾಯಕ್ ಹೆಬ್ರಿ, ಸಂದೇಶ್ ಪ್ರಭು ಹೆಬ್ರಿ, ಸಂದೀಪ್, ಇತ್ತೀಚೆಗೆ ನ್ಯಾಯಾಧೀಶೆಯಾಗಿರುವ ನಾಸಿರಾ ಬಾನು ಮೊದಲಾದವರು ಪ್ರಮುಖರು.
18 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್ !
ಕೋರ್ಟ್ ಪಕ್ಕವೇ 18 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣವಾಗುತ್ತಿದ್ದು, 218 ಚದರ ಮೀಟರ್ ವಿಸ್ತಾರ ಹೊಂದಿದೆ. ಸಾರ್ವಜನಿಕರಿಗೂ ಟಿ-ತಿಂಡಿ ಸವಿಯಲು ಮುಕ್ತ ಅವಕಾಶವಿರಲಿದೆ ಎಂದು ತಿಳಿದುಬಂದಿದೆ. ಕ್ಯಾಂಟೀನ್ ನಿರ್ಮಾಣ, ಕೋರ್ಟ್ ಕಟ್ಟಡಕ್ಕೆ ಬಣ್ಣ ಬಳಿದ ಬಳಿಕ ಅಂದರೆ ಡಿಸೆಂಬರ್ ಕೊನೆಯ ವೇಳೆಗೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.





















