ಕಗ್ಗದ ಸಂದೇಶ- ಅರಿವೆನ್ನುವುದು ಸಿಂಧು ನಾವದರ ಬಿಂದು…

“ಉಪ್ಪಿಷ್ಟು ಹುಳಿಯಷ್ಟು ಕಾರ ಸಿಹಿಯಷ್ಟಿಷ್ಟು|
ಒಪ್ಪಿರ್ದೊಡದು ಭೋಜ್ಯವಂತು ಜೀವಿತಂ|
ತಪ್ಪು ಸರಿ ಬೆಪ್ಪು ಜಾಣಂದುಕುಂದುಗಳ ಬಗೆ|
ಯಿಪ್ಪತ್ತು ಸೇರೆ ರುಚಿ -ಮಂಕುತಿಮ್ಮ”.

ಅಡುಗೆ ಮಾಡುವಾಗ ಉಪ್ಪು,ಹುಳಿ,ಕಾರ,ಸಿಹಿಯನ್ನು ಸರಿಯಾದ ಪ್ರಮಾಣದಲ್ಲಿ  ಹಾಕಿದಾಗ ಅಡುಗೆ ರುಚಿಯಾಗಿ ಭೋಜನ ಹಿತವಾಗುತ್ತದೆ. ಜೀವನವು ಹಾಗೆಯೆ ಸರಿ,ತಪ್ಪು, ಪೆದ್ದುತನ, ಜಾಣ್ಮೆ, ಅಂದು ಕುಂದು ಮುಂತಾದ ಬಗೆಬಗೆಯ ಭಾವಗಳು ಸೇರಿದಾಗ ಬದುಕು ಸಮರಸವಾಗಿರುತ್ತದೆ”  ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳಿದ್ದಾರೆ.

  ಜೀವನವೆನ್ನುವುದು ಅನ್ಯರ ಮುಂದೆ ನಟಿಸುವ ನಾಟಕವಲ್ಲ, ನಮಗಾಗಿ ಬಾಳುವ ರೀತಿ. ವೈವಿಧ್ಯತೆ ಎನ್ನುವುದು ಬದುಕಿನ ಭಾಗ. ನೈಜತೆ ನಮ್ಮ ಬಾಳಿನ ಮೆರುಗು.ಅಡುಗೆ ಮಾಡುವಾಗ ಉಪ್ಪು ರುಚಿಯಾಗಿದೆ ಎಂದು ಸ್ವಲ್ಪ ಹೆಚ್ಚು ಹಾಕಿದರೆ ಅಡುಗೆಯ ರುಚಿ ಕೆಡುತ್ತದೆ.ಉಪ್ಪು ಹುಳಿ ಖಾರ ಸಿಹಿ ಹೀಗೆ ಎಲ್ಲವನ್ನು ಹಿತಮಿತವಾಗಿ ಬಳಸಿದಾಗಲೇ ಅಡುಗೆ ಸ್ವಾದಿಷ್ಟವಾಗುವುದು. ಜೀವನವೂ ಅಂತೆಯೆ ಕಷ್ಟ ಸುಖ.ತಪ್ಪು ಒಪ್ಪು ಎಲ್ಲವನ್ನು ಸರಿದೂಗಿಸಿಕೊಂಡು ಹೋದಾಗಲೇ  ಸಾರ್ಥಕವಾಗುವುದು.  

    

ಎಡವದೆಯೆ ಮೈಗಾಯವಡೆಯದೆಯೆ ನಡೆಯ ಕಲಿತವರಂಟೆ? ಎಂಬಂತೆ  ತಪ್ಪುಗಳನ್ನು ಮಾಡದೆ ಜೀವನದಲ್ಲಿ ಏನನ್ನೂ  ಕಲಿಯಲಾಗದು. ‘ಬಿದ್ದರವಮಾನವಲ್ಲವೋ ಮುದ್ದುರಂಗ ಮತ್ತೆದ್ದು ನಿಲ್ಲದಿರೆ ಅವಮಾನ’  ಎಂಬ ಕವಿ ಎಸ್.ವಿ.ರಂಗಣ್ಣನವರ ನುಡಿಯಂತೆ ತಪ್ಪನ್ನು ಒಪ್ಪಿ ತಿದ್ದಿ ನಡೆಯಬೇಕು. ‘ಅರಿಯದೆ ಎಸಗಿದ ಪಾಪ ಅರಿತರದು ತನಗೊಳಿತು, ಅರಿತರಿತು ಮಾಡಿದರದು  ತನ್ನ ನಯನವನು ಇರಿದುಕೊಂಡಂತೆ ಸರ್ವಜ್ಞ’ ಅಂದರೆ ತಿಳಿಯದೆ ಮಾಡಿದ ತಪ್ಪನ್ನು ತಿಳಿದವರು ತಿಳಿ ಹೇಳಿದಾಗ ಅದನ್ನು ಅರ್ಥಮಾಡಿಕೊಂಡು ಸರಿ ದಾರಿಯಲ್ಲಿ ನಡೆಯಬೇಕು.ಮಾಡಿದ ತಪ್ಪನ್ನು ತಿದ್ದಿಕೊಳ್ಳದಿದ್ದರೆ ನಮ್ಮ ಕಣ್ಣನ್ನು ನಾವೇ ಇರಿದುಕೊಂಡಂತೆ ನಮ್ಮ ಜೀವನವೇ ಹಾಳಾಗುತ್ತದೆ.

    ಎಷ್ಟು  ದಿನ ಬದುಕಿದಿ ಎನ್ನುವುದಕ್ಕಿಂತ ಹೇಗೆ ಬದುಕಿದಿ  ಎನ್ನುವುದು ಮುಖ್ಯ. ಆಡಂಬರದ ಪ್ರತಿಷ್ಠೆಯ ಬದುಕಿಗಿಂತ ಸಹಜ  ಜೀವನ ಶೋಭೆಯನ್ನು ತರುತ್ತದೆ.ಪರಿಪೂರ್ಣ ಅಂತ ಜಗತ್ತಿನಲ್ಲಿ ಯಾರೂ  ಇಲ್ಲ. ಎಲ್ಲರೂ ಬಿದ್ದು ಎದ್ದವರೆ. ಎಚ್ಚೆತ್ತು ಮುನ್ನಡೆದವರು.ಜೀವನ ಸಾಗಿಸಲು ಬಹಳ ಬುದ್ಧಿವಂತಿಕೆ ಬೇಕಾಗಿಲ್ಲ.ಎಲ್ಲವೂ ನಮಗೆ ತಿಳಿದಿರುವುದು ಇಲ್ಲ, ತಿಳಿದಿರಬೇಕಾಗಿಯೂ ಇಲ್ಲ.  ‘ಅರಿತವನು ನಾನೆಂದು ನೀ ತೋರದಿರು ದರ್ಪ, ಅರಿವೊಂದು ಶರಧಿ ನಿನ್ನರಿವು ಅಲ್ಪ,ಅರಿತುದಕೆ ಲಕ್ಷಣವು ನಿಜ ವಿನಯ ಸೌಜನ್ಯ, ಅರಿದೊಡಿದ ನೀಂ ಮಾನ್ಯ-ಬೋಳುಬಸವ’ ಎಂಬ ನಿಜಗುಣ ಕವಿಯ ನುಡಿಯಂತೆ ನಮಗೆ ತಿಳಿದಿರುವುದು ಬಿಂದು ಉಳಿದಿರುವುದು ಸಿಂಧು. ಬದುಕಿನಲ್ಲಿ ಬಹಳ ಮುಖ್ಯವಾಗಿ ಬೇಕಾಗಿರುವುದು ತಿಳಿದುಕೊಳ್ಳಬೇಕು ಎನ್ನುವ ಮನಸ್ಥಿತಿ. ಹುಟ್ಟಿನಿಂದ ಚಟ್ಟದವರೆಗೆ ನಾವು ಕಲಿಯುತ್ತಲೇ ಇರಬೇಕು.ಬದುಕಿನ ಈ ಸತ್ಯವನ್ನರಿತು ನಿಜ ವಿನಯ ಸೌಜನ್ಯದಿಂದ ನಡೆದಾಗಲೇ ಜೀವನ ಪಾವನವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು











































error: Content is protected !!
Scroll to Top